ಆಸ್ಟ್ರೇಲಿಯನ್ ಓಪನ್ | ಸತತ 2ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಸಿನ್ನರ್
ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ನೇರ ಸೆಟ್ಗಳಿಂದ ಜಯ
ಜನ್ನಿಕ್ ಸಿನ್ನರ್ | PC : PTI
ಮೆಲ್ಬರ್ನ್: ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ರನ್ನು ಮಣಿಸಿದ ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಇಟಲಿ ಆಟಗಾರ ಸಿನ್ನರ್ ಅವರು ಝ್ವೆರೆವ್ರನ್ನು 6-3, 7-6(4), 6-3 ಸೆಟ್ಗಳ ಅಂತರದಿಂದ ಸದೆಬಡಿದರು.
ಸಿನ್ನರ್, ಮುಕ್ತ ಟೆನಿಸ್ ಯುಗದಲ್ಲಿ ಮೆಲ್ಬರ್ನ್ನಲ್ಲಿ ಪ್ರಶಸ್ತಿ ಉಳಿಸಿಕೊಂಡ 11ನೇ ಆಟಗಾರನಾಗಿದ್ದಾರೆ.
23ರ ಹರೆಯದ ಸಿನ್ನರ್ ಅವರು 1992-93ರ ನಂತರ ಸತತ 2ನೇ ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ ಗೆದ್ದಿರುವ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡರು. 1992-93ರಲ್ಲಿ ಜಿಮ್ ಕೋರಿಯರ್ ಈ ಸಾಧನೆ ಮಾಡಿದ್ದರು.
ನೊವಾಕ್ ಜೊಕೊವಿಕ್ ಅವರು 10 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದಾರೆ.
ಸಿನ್ನರ್ ಮೂರು ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿದ ಇಟಲಿಯ ಮೊದಲ ಆಟಗಾರನೆಂಬ ಹಿರಿಮೆಗೂ ಪಾತ್ರರಾದರು.
ಕಳೆದ ವರ್ಷ ಜೂನ್ನಲ್ಲಿ ವಿಶ್ವದ ನಂ.1 ಸ್ಥಾನಕ್ಕೇರಿದ ನಂತರ ಸಿನ್ನರ್ ಅವರು ಪ್ರತಿ ವಾರವೂ ತನ್ನ ಅಗ್ರ ರ್ಯಾಂಕಿಂಗ್ ಅನ್ನು ಭದ್ರಪಡಿಸಿಕೊಂಡಿದ್ದಾರೆ. ರಾಡ್ ಲಾವೆರ್ ಅರೆನಾದಲ್ಲಿ ರವಿವಾರ ನಡೆದ ಫೈನಲ್ ಫೈಟ್ನಲ್ಲಿ ವಿಶ್ವದ ನಂ.2ನೇ ಆಟಗಾರ ಝ್ವೆರೆವ್ ವಿರುದ್ಧ ಸಿನ್ನರ್ ಸಂಪೂರ್ಣ ಮೇಲುಗೈ ಸಾಧಿಸಿದರು.
2019ರ ನಂತರ ಇದೇ ಮೊದಲ ಬಾರಿ ಅಗ್ರ ಎರಡು ಶ್ರೇಯಾಂಕದ ಆಟಗಾರರು ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಸೆಣಸಾಡಿದರು. 2019ರಲ್ಲಿ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರು ನಂ.2 ರಫೆಲ್ ನಡಾಲ್ರನ್ನು ನೇರ ಸೆಟ್ಗಳಿಂದ ಮಣಿಸಿದ್ದರು.
ಸಿನ್ನರ್ ಅವರು ಇದೀಗ ಮೂರನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದು, ಇದರಲ್ಲಿ ಸೆಪ್ಟಂಬರ್ನಲ್ಲಿ ಜಯಿಸಿದ ಯು.ಎಸ್. ಓಪನ್ ಕೂಡ ಸೇರಿದೆ. ಈ ಅವಧಿಯಲ್ಲಿ ಸಿನ್ನರ್ ಅವರು 9 ಟೂರ್ನಿಗಳಲ್ಲಿ ಜಯಶಾಲಿಯಾಗಿದ್ದರು. ಸದ್ಯ ಅವರು ಕಳೆದ ವರ್ಷದಿಂದ 21 ಪಂದ್ಯಗಳಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದ್ದಾರೆ.
2020ರ ಯು.ಎಸ್. ಓಪನ್ ಹಾಗೂ 2024ರ ಫ್ರೆಂಚ್ ಓಪನ್ ನಂತರ ಇದೀಗ ಮೂರನೇ ಬಾರಿ ಝ್ವೆರೆವ್ ಅವರು ಫೈನಲ್ನಲ್ಲಿ ಸೋಲನುಭವಿಸಿ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದಾರೆ. ಮತ್ತೊಂದೆಡೆ ಸಿನ್ನರ್ ತಾನಾಡಿರುವ ಎಲ್ಲ 3 ಗ್ರ್ಯಾನ್ಸ್ಲಾಮ್ ಫೈನಲ್ನಲ್ಲಿ ಜಯ ಸಾಧಿಸಿದ್ದಾರೆ. 1968ರಲ್ಲಿ ಟೆನಿಸ್ ಮುಕ್ತ ಯುಗ ಆರಂಭವಾದ ನಂತರ ಈ ಸಾಧನೆ ಮಾಡಿದ 8ನೇ ಆಟಗಾರ ಎನಿಸಿಕೊಂಡಿದ್ದಾರೆ.
ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್ನಲ್ಲಿ ಕಾರ್ಲೊಸ್ ಅಲ್ಕರಾಝ್ ಹಾಗೂ 2020ರ ಯು.ಎಸ್. ಓಪನ್ನಲ್ಲಿ ಡೊಮಿನಿಕ್ ಥೀಮ್ ವಿರುದ್ಧ ಫೈನಲ್ನಲ್ಲಿ ಸೋತಿದ್ದ ಝ್ವೆರೆವ್ ಅವರ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಕನಸು ಇಂದು ಕೂಡ ಕೈಗೂಡಲಿಲ್ಲ.
ಝ್ವೆರೆವ್ ಈ ಹಿಂದಿನ ಗ್ರ್ಯಾನ್ಸ್ಲಾಮ್ ಫೈನಲ್ನಲ್ಲಿ ಐದು ಸೆಟ್ಗಳಿಂದ ಸೋತಿದ್ದರು. ಇಂದು ಅವರು ತೀವ್ರ ಸ್ಪರ್ಧೆಯೊಡ್ಡಿದ್ದಾರೆ.
2024ರಲ್ಲಿ ತನ್ನ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸುವ ಮೊದಲು ಸಿನ್ನರ್ ಕಠಿಣ ಸವಾಲನ್ನು ಎದುರಿಸಿದ್ದರು. ನೊವಾಕ್ ಜೊಕೊವಿಕ್ ಸವಾಲನ್ನು ಹಿಮ್ಮೆಟ್ಟಿಸಿದ್ದ ಸಿನ್ನರ್ ಫೈನಲ್ನಲ್ಲಿ 2021ರ ಯು.ಎಸ್. ಓಪನ್ ಚಾಂಪಿಯನ್ ಡೇನಿಯಲ್ ಮೆಡ್ವೆಡೆವ್ ಎದುರು ಎರಡು ಸೆಟ್ಗಳ ಹಿನ್ನಡೆಯಿಂದ ಚೇತರಿಸಿಕೊಂಡು ಚಾಂಪಿಯನ್ ಆಗಿದ್ದರು.
ಇಂದು ಫೈನಲ್ ಪಂದ್ಯದಲ್ಲಿ ಝ್ವೆರೆವ್ರನ್ನು ಮಣಿಸುವ ಮೂಲಕ ಸಿನ್ನರ್ ಅವರು 2005-2006ರಲ್ಲಿ ರಫೆಲ್ ನಡಾಲ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು. ನಡಾಲ್ 2005-2006ರಲ್ಲಿ ತನ್ನ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ 1 ವರ್ಷದ ನಂತರ ಅದೇ ಟೂರ್ನಿಯಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದರು.