ಆಸ್ಟ್ರೇಲಿಯನ್ ಓಪನ್ : ಅನಸ್ ಜಾಬಿರ್, ಕ್ಯಾರಲೈನ್ ವೊಝ್ನಿಯಾಕಿ ಹೊರಗೆ
ಪರಾಕ್ರಮ ಮೆರೆದ ರಶ್ಯದ ಕಿರಿಯ ಆಟಗಾರ್ತಿಯರು
ಅನಸ್ ಜಾಬಿರ್ |Photo: X
ಮೆಲ್ಬರ್ನ್: ಟ್ಯುನೀಶಿಯದ ಆರನೇ ಶ್ರೇಯಾಂಕದ ಆಟಗಾರ್ತಿ ಅನಸ್ ಜಾಬಿರ್ ಮತ್ತು ಮಾಜಿ ಚಾಂಪಿಯನ್ ಕ್ಯಾರಲೈನ್ ವೊಝ್ನಿಯಾಕಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಅವರನ್ನು ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯಗಳಲ್ಲಿ ರಶ್ಯದ ಯುವ ಆಟಗಾರರು ಸೋಲಿಸಿದ್ದಾರೆ.
ರಶ್ಯದ ಮಿರಾ ಆಂಡ್ರೀವ ಮತ್ತು ಮರಿಯಾ ಟಿಮೊಫೀವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಕೇವಲ 16 ವರ್ಷದ ಆಂಡ್ರೀವ 29 ವರ್ಷದ ಉನಸ್ ಜಾಬೀರ್ರನ್ನು ರಾಡ್ ಲ್ಯಾವರ್ ಅರೀನಾ ಅಂಗಳದಲ್ಲಿ ಕೇವಲ 54 ನಿಮಿಷಗಳಲ್ಲಿ 6-0, 6-2 ಸೆಟ್ಗಳಿಂದ ಮಣಿಸಿದರು.
“ಬಹುಷಃ, ಅದು ನಾನು ಈವರೆಗೆ ಆಡಿದ ಪಂದ್ಯಗಳಲ್ಲೇ ಅತ್ಯುತ್ತಮ’’ ಎಂದು ಶಾಲಾ ಬಾಲಕಿ ಆಂಡ್ರೀವ ಹೇಳಿದರು. ಅವರು ಕಳೆದ ವರ್ಷದ ವಿಂಬಲ್ಡನ್ನಲ್ಲಿ ನಾಲ್ಕನೇ ಸುತ್ತು ತಲುಪಿದ್ದರು.
ಬಳಿಕ, 20 ವರ್ಷದ ಮರಿಯಾ ಟಿಮೊಫೀವ. 2018ರ ಚಾಂಪಿಯನ್ ವೊಝ್ನಿಯಾಕಿಯನ್ನು 1-6, 6-4, 6-1 ಸೆಟ್ಗಳಿಂದ ಸೋಲಿಸಿದರು.
ಮಳೆಯಿಂದಾಗಿ ಹೊರಾಂಗಣಗಳಲ್ಲಿ ಪಂದ್ಯಗಳು ಮೂರು ಗಂಟೆ ತಡವಾಗಿ ಆರಂಭಗೊಂಡವು.
ಕೋಕೊ ಗೌಫ್ 3ನೇ ಸುತ್ತಿಗೆ
ಯುಎಸ್ ಓಪನ್ ಚಾಂಪಿಯನ್ ಅಮೆರಿಕದ ಕೋಕೊ ಗೌಫ್ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಬುಧವಾರ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಅವರು ಎರಡನೇ ಸುತ್ತಿನ ಪಂದ್ಯದಲ್ಲಿ ತನ್ನದೇ ದೇಶದ ಕ್ಯಾರಲೈನ್ ಡೋಲ್ಹೈಡ್ರನ್ನು 7-6(7/2), 6-2 ಸೆಟ್ಗಳಿಂದ ಪರಾಭವಗೊಳಿಸಿದರು.
“ನಾನು ಇಂದು ಹೆದರಲಿಲ್ಲ. ನಾನು ಉತ್ತಮ ಟೆನಿಸ್ ಆಡಲು ಪ್ರಯತ್ನಿಸಿದೆ’’ ಎಂದು 19 ವರ್ಷದ ಗೌಫ್ ಹೇಳಿದರು.
ಮೂರನೇ ಸುತ್ತಿನಲ್ಲಿ ಅವರು ಅಮೆರಿಕದ ಇನ್ನೋರ್ವ ಆಟಗಾರ್ತಿ ಅಲಿಶಿಯಾ ಪಾಕ್ರ್ಸ್ರನ್ನು ಎದುರಿಸಲಿದ್ದಾರೆ.
ಜನ್ನಿಕ್ ಸಿನ್ನರ್ 3ನೇ ಸುತ್ತಿಗೆ ಲಗ್ಗೆ
ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಇಟಲಿಯ ನಾಲ್ಕನೇ ಶ್ರೇಯಾಂಕದ ಜನ್ನಿಕ್ ಸಿನ್ನರ್ ಪುರುಷರ ಸಿಂಗಲ್ಸ್ನಲ್ಲಿ ಬುಧವಾರ ಮೂರನೇ ಸುತ್ತು ತಲುಪಿದ್ದಾರೆ.
ಮಾರ್ಗರೆಟ್ ಕೋರ್ಟ್ ಅರೀನಾದಲ್ಲಿ ನಡೆದ ಪಂದ್ಯದಲ್ಲಿ, 22 ವರ್ಷದ ಸಿನ್ನರ್ ನೆದರ್ಲ್ಯಾಂಡ್ಸ್ನ ಜೆಸ್ಪರ್ ಡಿ ಜೊಂಗ್ರನ್ನು 6-2, 6-2, 6-2 ಸೆಟ್ಗಳಿಂದ ಲೀಲಾಜಾಲವಾಗಿ ಮಣಿಸಿದರು. ಪಂದ್ಯವು ಕೇವಲ ಒಂದು ಗಂಟೆ 43 ನಿಮಿಷಗಳಲ್ಲಿ ಮುಕ್ತಾಯ ಕಂಡಿತು.