ಆಸ್ಟ್ರೇಲಿಯನ್ ಓಪನ್: ಮೊದಲ ಸುತ್ತಿನಲ್ಲಿ ಮುಗ್ಗರಿಸಿದ ಮರ್ರೆ, ವಿಂಬಲ್ಡನ್ ಚಾಂಪಿಯನ್ ವೊಂಡ್ರೊಸೋವಾ
Photo: X
ಮೆಲ್ಬರ್ನ್ : ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಐದು ಬಾರಿ ಫೈನಲ್ಗೆ ತಲುಪಿದ್ದ ಬ್ರಿಟನ್ನ ಹಿರಿಯ ಆಟಗಾರ ಆ್ಯಂಡಿ ಮರ್ರೆ ಹಾಗೂ ವಿಂಬಲ್ಡನ್ ಚಾಂಪಿಯನ್ ವೊಂಡ್ರೊಸೋವಾ ಸೋಮವಾರ ಮೊದಲ ಸುತ್ತಿನ ಪಂದ್ಯದಲ್ಲೇ ಮುಗ್ಗರಿಸಿದ್ದಾರೆ.
ಮರ್ರೆ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನ ಆಟಗಾರ ಥಾಮಸ್ ಮಾರ್ಟಿನ್ ವಿರುದ್ಧ 4-6, 2-6, 2-6 ಸೆಟ್ಗಳ ಅಂತರದಿಂದ ಸೋತಿದ್ದಾರೆ. 61 ನಿಮಿಷಗಳ ಕಾಲ ನಡೆದ ಮೊದಲ ಸೆಟ್ನಲ್ಲಿ 36ರ ಹರೆಯದ ಮರ್ರೆ ಪ್ರಬಲ ಹೋರಾಟ ನೀಡಿದ್ದರು. ಆ ನಂತರ 30ನೇ ಶ್ರೇಯಾಂಕದ ಮಾರ್ಟಿನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಆ್ಯಂಡಿ ಅವರಂತಹ ಲೆಜೆಂಡ್ ಆಟಗಾರರ ಎದುರು ಆಡುವುದು ತುಂಬಾ ಕಷ್ಟಕರ. ಅವರು ನನ್ನ ಆದರ್ಶ ವ್ಯಕ್ತಿಯಾಗಿದ್ದಾರೆ. ಇಂದು ನಾನು ಉತ್ತಮವಾಗಿ ಆಡಿದ್ದೇನೆ. ನಾನು ನನ್ನ ಗೇಮ್ ಹಾಗೂ ಪಾಯಿಂಟ್ಸ್ನತ್ತ ಹೆಚ್ಚು ಗಮನ ಹರಿಸಿದ್ಧೇನೆ ಎಂದು ವಯಸ್ಸಿನಲ್ಲಿ ಮರ್ರೆಗಿಂತ 12 ವರ್ಷ ಕಿರಿಯನಾಗಿರುವ ಮಾರ್ಟಿನ್ ಹೇಳಿದ್ದಾರೆ.
ಮರ್ರೆ ಮೂರನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು ಎದುರಿಸಲಿದ್ದಾರೆ ಎಂದು ಕಾದು ಕುಳಿತ್ತಿದ್ದ ಮರ್ರೆ ಅಭಿಮಾನಿಗಳಿಗೆ ಈ ಸೋಲು ನಿರಾಸೆ ತಂದಿದೆ.
ಕಳೆದ ವರ್ಷ ಫ್ರೆಂಚ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದ ಮಾರ್ಟಿನ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್ನ ಮೊನ್ಫಿಲ್ಸ್ರನ್ನು ಎದುರಿಸಲಿದ್ದಾರೆ.
ಮರ್ರೆ 2023ರ ಅಂತ್ಯದಲ್ಲಿ ಕೊನೆಯ 4 ಟೂರ್ನಮೆಂಟ್ಗಳಲ್ಲಿ ಕೇವಲ ಒಂದು ಪಂದ್ಯವನ್ನು ಜಯಿಸಿದ್ದರು. ಮುಂಬರುವ ಒಂದು ವರ್ಷದಲ್ಲಿ ನನ್ನ ವೃತ್ತಿಜೀವನ ಅಂತ್ಯಗೊಳಿಸುವೆ ಎಂದು ಇತ್ತೀಚೆಗೆ ಬ್ರಿಸ್ಬೇನ್ನಲ್ಲಿ ಹೇಳಿದ್ದರು.
2013 ಹಾಗೂ 2016ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದ ಮರ್ರೆ 2012ರಲ್ಲಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದರು.