ಆಸ್ಟ್ರೇಲಿಯನ್ ಓಪನ್: ಸೆಮಿ ಫೈನಲ್ ನಲ್ಲಿ ಜೊಕೊವಿಕ್ ಗೆ ಆಘಾತಕಾರಿ ಸೋಲು
ಮೆಲ್ಬರ್ನ್ ನಲ್ಲಿ ಸರ್ಬಿಯ ಆಟಗಾರನ ಪ್ರಾಬಲ್ಯ ಮುರಿದ ಇಟಲಿಯ ಸಿನ್ನೆರ್
ನೊವಾಕ್ ಜೊಕೊವಿಕ್ | Photo : X \ @DjokovicFan_
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ಇಟಲಿಯ ಜನ್ನಿಕ್ ಸಿನ್ನೆರ್ಗೆ ಶರಣಾಗಿರುವ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವುದರಿಂದ ವಂಚಿತರಾಗಿದ್ದಾರೆ.
ಶುಕ್ರವಾರ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಸಿನ್ನೆರ್ 6-1, 6-2, 6-7(6), 6-3 ಸೆಟ್ ಗಳ ಅಂತರದಿಂದ ಜೊಕೊವಿಕ್ರನ್ನು ಮಣಿಸಿದರು. ಈ ಮೂಲಕ ಆಸ್ಟ್ರೇಲಿಯನ್ ಓಪನ್ ನಲ್ಲಿ ಜೊಕೊವಿಕ್ ಅವರ ಪ್ರಾಬಲ್ಯವನ್ನು ಮುರಿದರು. ಮಾತ್ರವಲ್ಲ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್ ಗೆ ಪ್ರವೇಶಿಸಿದರು.
ಸಿನ್ನೆರ್ ಎದುರು ಆಘಾತಕಾರಿ ಸೋಲನುಭವಿಸಿರುವ ಜೊಕೊವಿಕ್ ಅವರ ಆಸ್ಟ್ರೇಲಿಯನ್ ಓಪನ್ ನಲ್ಲಿ 11ನೇ ಪ್ರಶಸ್ತಿ ಹಾಗೂ ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಕಿರೀಟ ಧರಿಸುವ ಕನಸು ಕಮರಿದೆ. ಸಿನ್ನೆರ್ ಇತ್ತೀಚೆಗೆ ಎಟಿಪಿ ಫೈನಲ್ಸ್ ನ ಗ್ರೂಪ್ ಹಂತದಲ್ಲಿ ಜೊಕೊವಿಕ್ ಗೆ ಸೋಲಿನ ರುಚಿ ಉಣಿಸಿದ್ದರು.
ಇಂದಿನ ಸೋಲಿಗಿಂತ ಮೊದಲು ಜೊಕೊವಿಕ್ 2018ರಿಂದ ಮೆಲ್ಬರ್ನ್ ಪಾರ್ಕ್ ನಲ್ಲಿ ಸತತ 33 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದ್ದರು.
ಜೊಕೊವಿಕ್ ಕೊರೋನ ವೈರಸ್ ವ್ಯಾಕ್ಸಿನ್ ಗೆ ಸಂಬಂಧಿಸಿದ ವಿವಾದದಿಂದಾಗಿ 2022ರ ಆಸ್ಟ್ರೇಲಿಯನ್ ಓಪನ್ನಿಂದ ಹೊರಗುಳಿದಿದ್ದರು.
ಶುಕ್ರವಾರದ ಹಣಾಹಣಿಯಲ್ಲಿ 4ನೇ ಶ್ರೇಯಾಂಕದ ಸಿನ್ನೆರ್ 10 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೊಕೊವಿಕ್ ವಿರುದ್ಧ ಆರಂಭದಲ್ಲೇ ಮೇಲುಗೈ ಸಾಧಿಸಿದರು. 22ರ ಹರೆಯದ ಸಿನ್ನೆರ್ ಮೊದಲೆರಡು ಸೆಟ್ ಗಳನ್ನು 6-1, 6-2 ಅಂತರದಿಂದ ಗೆದ್ದುಕೊಂಡು ಪ್ರತಿರೋಧ ಒಡ್ಡಿದರು. ಜೊಕೊವಿಕ್ ಮೊದಲೆರಡು ಸೆಟ್ ಗಳಲ್ಲಿ 29 ಅನಗತ್ಯ ತಪ್ಪುಗಳನ್ನು ಎಸಗಿದರು.
ಮೆಲ್ಬರ್ನ್ ಪಾರ್ಕ್ ನಲ್ಲಿ ಸೆಮಿ ಫೈನಲ್ ಪಂದ್ಯ ಸೋಲದ ಹಾಲಿ ಚಾಂಪಿಯನ್ ಜೊಕೊವಿಕ್ ಎದುರು ತಾಳ್ಮೆಯಿಂದ ಆಡಿದ ಸಿನ್ನೆರ್ 3ನೇ ಸೆಟ್ಟನ್ನು ಟೈ-ಬ್ರೇಕರ್ನಲ್ಲಿ ಕಳೆದುಕೊಂಡರು. 76 ನಿಮಿಷಗಳ ಕಾಲ ನಡೆದ ಮೂರನೇ ಸೆಟ್ ನಲ್ಲಿ ತನ್ನೆಲ್ಲಾ ಅನುಭವ ಬಳಸಿಕೊಂಡ ಜೊಕೊವಿಕ್ ಟೈ-ಬ್ರೇಕರ್ನಲ್ಲಿ 7-6(6) ಅಂತರದಿಂದ ಜಯ ಸಾಧಿಸಿದರು.
ಆದಾಗ್ಯೂ ಸಿನ್ನೆರ್ ನಾಲ್ಕನೇ ಸೆಟನ್ನು 6-3 ಅಂತರದಿಂದ ಜಯಿಸುವಲ್ಲಿ ಯಶಸ್ವಿಯಾದರು. ಟೆನಿಸ್ ಇತಿಹಾಸದಲ್ಲಿ ಸಿನ್ನೆರ್ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಇಟಲಿಯ ಮೊದಲ ಆಟಗಾರ ಎನಿಸಿಕೊಂಡರು.
ಸಿನ್ನೆರ್ ಹಿಂದಿನ 3 ಪಂದ್ಯಗಳಲ್ಲಿ ಎರಡು ಬಾರಿ ಜೊಕೊವಿಕ್ ಗೆ ಸೋಲುಣಿಸಿದ್ದರು. ಇಂದು ಮೆಲ್ಬರ್ನ್ ನಲ್ಲಿ 36ರ ಹರೆಯದ ಜೊಕೊವಿಕ್ ಗೆ ಸೋಲುಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು.
ಮುಂದಿನ ಸುತ್ತಿನಲ್ಲಿ ಸಿನ್ನೆರ್ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಸವಾಲನ್ನು ಎದುರಿಸಲಿದ್ದಾರೆ.