ಆಸ್ಟ್ರೇಲಿಯನ್ ಓಪನ್ | ಸಿನ್ನರ್, ಮೊನ್ಫಿಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ಗೆ

ಜನ್ನಿಕ್ ಸಿನ್ನರ್ | PC : NDTV
ಮೆಲ್ಬರ್ನ್: ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಹಾಗೂ ಫ್ರೆಂಚ್ನ ಹಿರಿಯ ಆಟಗಾರ ಗಾಯೆಲ್ ಮೊನ್ಫಿಲ್ಸ್ ಆಸ್ಟ್ರೇಲಿಯನ್ ಓಪನ್ನಲ್ಲಿ ಅಂತಿಮ-16ರ ಸುತ್ತು ತಲುಪಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ನ 3ನೇ ಸುತ್ತಿನ ಪಂದ್ಯದಲ್ಲಿ ಇಟಲಿ ಆಟಗಾರ ಸಿನ್ನರ್ ಅಮೆರಿಕದ ಶ್ರೇಯಾಂಕರಹಿತ ಆಟಗಾರ ಮಾರ್ಕೊಸ್ ಗಿರೊನ್ರನ್ನು 6-3, 6-4, 6-2 ನೇರ ಸೆಟ್ಗಳ ಅಂತರದಿಂದ ಸದೆಬಡಿದರು.
ರಾಡ್ ಲಾರೆವ್ ಅರೆನಾದಲ್ಲಿ ಸಿನ್ನರ್ ಅವರು ಈ ಹಿಂದೆ ಅಮೆರಿಕದ ಆಟಗಾರರ ವಿರುದ್ಧ ಆಡಿರುವ ಎಲ್ಲ 13 ಗ್ರ್ಯಾನ್ಸ್ಲಾಮ್ ಪಂದ್ಯಗಳನ್ನು ಆಡಿದ್ದು, ಇಂದು ಆ ದಾಖಲೆಯನ್ನು ಮುಂದುವರಿಸಿದ್ದಾರೆ.
ವಿಶ್ವದ ನಂ.46ನೇ ಆಟಗಾರ ಗಿರೊನ್ ಆರಂಭದಲ್ಲಿ ಒಂದಷ್ಟು ಹೋರಾಟ ನೀಡಿದರು. ಆದರೆ, ಗಾಯದ ಸಮಸ್ಯೆಗೀಡಾದ ನಂತರ ಸಲೀಸಾಗಿ ಆಡಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ಮೆಲ್ಬರ್ನ್ ಹಾಗೂ ನ್ಯೂಯಾರ್ಕ್ನಲ್ಲಿ ಅಮೋಘ ಜಯ ಸಾಧಿಸಿರುವ ಸಿನ್ನರ್ ಅವರು ಹಾರ್ಡ್ಕೋರ್ಟ್ ಗ್ರ್ಯಾನ್ಸ್ಲಾಮ್ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವ ಗುರಿ ಹೊಂದಿದ್ದು, ಮುಂದಿನ ಸುತ್ತಿನಲ್ಲಿ ಸರ್ಬಿಯದ ಮಿಯೋಮಿರ್ ಕೆಕ್ಮಾನೋವಿಕ್ ಅಥವಾ ಡೆನ್ಮಾರ್ಕ್ನ 13ನೇ ಶ್ರೇಯಾಂಕದ ಹೊಲ್ಗರ್ ರೂನ್ರನ್ನು ಎದುರಿಸಲಿದ್ದಾರೆ.
*ಟೇಲರ್ ಫ್ರಿಟ್ಜ್ಗೆ ಶಾಕ್ ನೀಡಿದ ಮೊನ್ಫಿಲ್ಸ್ : ನಾಲ್ಕನೇ ಶ್ರೇಯಾಂಕದ ಆಟಗಾರ ಟೇಲರ್ ಫ್ರಿಟ್ಝ್ರನ್ನು ಮಣಿಸಿದ ಗಾಯೆಲ್ ಮೊನ್ಫಿಲ್ಸ್ ಆಸ್ಟ್ರೇಲಿಯನ್ ಓಪನ್ನಲ್ಲಿ ಅಂತಿಮ-16ರ ಸುತ್ತು ತಲುಪುವ ಮೂಲಕ ಭರ್ಜರಿ ಪ್ರದರ್ಶನದ ಮುನ್ಸೂಚನೆ ನೀಡಿದ್ದಾರೆ.
ಶನಿವಾರ ಮೆಲ್ಬರ್ನ್ ಪಾರ್ಕ್ ಮೈದಾನದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ 3ನೇ ಸುತ್ತಿನ ಪಂದ್ಯದಲ್ಲಿ 38ರ ಹರೆಯದ ಮೊನ್ಫಿಲ್ಸ್ ಆಸ್ಟ್ರೇಲಿಯದ ಫ್ರಿಟ್ಝ್ರನ್ನು 7-5, 7-6(7/1), 6-4 ಸೆಟ್ಗಳ ಅಂತರದಿಂದ ಮಣಿಸಿದರು.
19ನೇ ಬಾರಿ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾಗವಹಿಸುತ್ತಿರುವ ಮೊನ್ಫಿಲ್ಸ್ ಆರನೇ ಬಾರಿ 4ನೇ ಸುತ್ತು ತಲುಪಿದ್ದಾರೆ.
ಮೆಲ್ಬರ್ನ್ ಪಾರ್ಕ್ ಮೈದಾನದಲ್ಲಿ ರೋಜರ್ ಫೆಡರರ್ ನಂತರ ಅಂತಿಮ-16ನೇ ಸುತ್ತು ತಲುಪಿದ ಎರಡನೇ ಹಿರಿಯ ವಯಸ್ಸಿನ ಆಟಗಾರ ಮೊನ್ಫಿಲ್ಸ್.
ಮೊನ್ಫಿಲ್ಸ್ರನ್ನು ಎದುರಿಸುವ ಮೊದಲು ಎರಡು ಪಂದ್ಯಗಳಲ್ಲಿ ಕೇವಲ 8 ಗೇಮ್ಗಳನ್ನು ಕೈಚೆಲ್ಲಿದ್ದ ಫ್ರಿಟ್ಝ್ ಉತ್ತಮ ಪ್ರದರ್ಶನ ನೀಡಿದ್ದರು. ಶ್ರೇಯಾಂಕರಹಿತ ಮೊನ್ಫಿಲ್ಸ್ ವಿಶ್ವದ ನಂ.4ನೇ ಆಟಗಾರನ ವಿರುದ್ಧ ಜಯ ಸಾಧಿಸಿ ಮಹತ್ವದ ಸಾಧನೆ ಮಾಡಿದರು.