ಆಸ್ಟ್ರೇಲಿಯನ್ ಓಪನ್ : ಸೆಮಿ ಫೈನಲ್ ಗೆ ತಲುಪಿ ಇತಿಹಾಸ ನಿರ್ಮಿಸಿದ ಉಕ್ರೇನ್ ಆಟಗಾರ್ತಿ ಡಯಾನಾ
ಡಯಾನಾ | Photo: NDTV
ಮೆಲ್ಬರ್ನ್: ಉಕ್ರೇನ್ ಆಟಗಾರ್ತಿ ಡಯಾನಾ ಯಾಸ್ಟ್ರೆಂಸ್ಕಾ ಆಸ್ಟ್ರೇಲಿಯನ್ ಓಪನ್ನಲ್ಲಿ ಬುಧವಾರ ತನ್ನ ಟೆನಿಸ್ ಪರಾಕ್ರಮ ಪ್ರದರ್ಶಿಸಿದರು. ಮುಕ್ತ ಟೆನಿಸ್ ಯುಗದಲ್ಲಿ ಪ್ರತಿಷ್ಠಿತ ಟೂರ್ನಮೆಂಟ್ ನಲ್ಲಿ ಸೆಮಿ ಫೈನಲ್ ತಲುಪಿದ ಎರಡನೇ ಕ್ವಾಲಿಫೈಯರ್ ಆಟಗಾರ್ತಿ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.
ರಾಡ್ ಲಾವೆರ್ ಅರೆನಾದಲ್ಲಿ ಬುಧವಾರ 78 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.93ನೇ ಆಟಗಾರ್ತಿ ಡಯಾನಾ ಝೆಕ್ನ ಶ್ರೇಯಾಂಕರಹಿತ ಆಟಗಾರ್ತಿ ಲಿಂಡಾ ನೊಸ್ಕೋವಾರನ್ನು 6-3, 6-4 ನೇರ ಸೆಟ್ ಗಳ ಅಂತರದಿಂದ ಸದೆಬಡಿದರು.
ಡಯಾನಾ ಸೆಮಿ ಫೈನಲ್ ಸುತ್ತಿನಲ್ಲಿ ರಶ್ಯದ ಶ್ರೇಯಾಂಕರಹಿತ ಆಟಗಾರ್ತಿ ಅನ್ನಾ ಕಲಿನ್ಸ್ಕಾಯಾ ಅಥವಾ ಚೀನಾದ 12ನೇ ಶ್ರೇಯಾಂಕದ ಝೆಂಗ್ ಕ್ಷಿನ್ವೆನ್ ಸವಾಲನ್ನು ಎದುರಿಸಲಿದ್ದಾರೆ.
ಡಯಾನಾ 1978ರ ನಂತರ ವರ್ಷದ ಮೊದಲ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಅಂತಿಮ-4ರ ಹಂತ ತಲುಪಿದ ಮೊದಲ ಕ್ವಾಲಿಫೈಯರ್ ಆಟಗಾರ್ತಿಯಾಗಿದ್ದಾರೆ. 1978ರಲ್ಲಿ ಆಸ್ಟ್ರೇಲಿಯದ ಕ್ರಿಸ್ಟಿನ್ ಮ್ಯಾಟಿಸನ್ ಈ ಸಾಧನೆ ಮಾಡಿದ್ದರು.
ಇತಿಹಾಸ ನಿರ್ಮಿಸಿರುವುದಕ್ಕೆ ತುಂಬಾ ಖುಷಿಯಾಗಿದೆ. ಆಸ್ಟ್ರೇಲಿಯದ ಆಟಗಾರ್ತಿ ಕ್ರಿಸ್ಟಿನ್ ಮ್ಯಾಟಿಸನ್ ಮೊದಲ ಬಾರಿ ಈ ಸಾಧನೆ ಮಾಡಿದ್ದಾಗ ನಾನು ಹುಟ್ಟಿರಲಿಲ್ಲ. ನಾನು ಇಂದು ಚೆನ್ನಾಗಿ ಆಡಿದ್ದೇನೆ. ಆದರೆ, ಅತ್ಯುತ್ತಮವಾಗಿ ಆಡಿದ್ದೇನೆಂದು ಹೇಳಲಾರೆ. ನಾನು ಸ್ವಲ್ಪಮಟ್ಟಿಗೆ ದಣಿದಿದ್ದೆ ಎಂದು ಐತಿಹಾಸಿಕ ಸಾಧನೆಯ ಬಗ್ಗೆ ಡಯಾನಾ ಪ್ರತಿಕ್ರಿಯಿಸಿದರು.
ಎಲ್ಲ 3 ಅರ್ಹತಾ ಪಂದ್ಯಗಳನ್ನು ಜಯಿಸಿ ಮೆಲ್ಬರ್ನ್ ಪಾರ್ಕ್ನಲ್ಲಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದ ಡಯಾನಾ ಮೊದಲ ಸುತ್ತಿನಲ್ಲಿ ವಿಂಬಲ್ಡನ್ ಚಾಂಪಿಯನ್ ಹಾಗೂ 7ನೇ ಶ್ರೇಯಾಂಕದ ಮಾರ್ಕೆಟಾ ವೊಂಡ್ರೊಸೋವಾರನ್ನು ಸೋಲಿಸಿ ಶಾಕ್ ನೀಡಿದ್ದರು. ಆನಂತರ 4ನೇ ಸುತ್ತಿನಲ್ಲಿ ಎರಡು ಬಾರಿಯ ಚಾಂಪಿಯನ್ ವಿಕ್ಟೋರಿಯ ಅಝೆರೆಂಕಾರಿಗೆ ಸೋಲುಣಿಸಿ ಟೂರ್ನಿಯಿಂದ ನಿರ್ ಗಮಿಸುವಂತೆ ಮಾಡಿದ್ದರು.
ಡಯಾನಾ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಝೆಕ್ ಆಟಗಾರ್ತಿ ಲಿಂಡಾ ನೊಸ್ಕೋವಾ ಮೂರನೇ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಸಹಿತ ಪ್ರಮುಖ ಆಟಗಾರ್ತಿಯರನ್ನು ಸೋಲಿಸಿ ಟೂರ್ನಿಯಲ್ಲಿ ಅಲೆ ಎಬ್ಬಿಸಿದ್ದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೊಸ್ಕೋವಾ ಆರಂಭದಲ್ಲಿ ಮುನ್ನಡೆ ಪಡೆದಿದ್ದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಡಯಾನಾ 2-2ರಿಂದ ಸಮಬಲಗೊಳಿಸಿದರು.
ಜೀವನಶ್ರೇಷ್ಠ 21ನೇ ರ್ಯಾಂ ಕ್ ತಲುಪಿರುವ 23ರ ಹರೆಯದ ಡಯಾನಾ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ಈ ಹಿಂದೆ ನಿಷೇಧ ಎದುರಿಸಿದ್ದರು. 2021ರಲ್ಲಿ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿ ನಿಷೇಧದಿಂದ ಹೊರಬಂದಿದ್ದರು.
ಡಯಾನಾ 2021ರ ನಂತರ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಎರಡನೇ ಕ್ವಾಲಿಫೈಯರ್ ಆಟಗಾರ್ತಿ ಎನಿಸಿಕೊಂಡಿದ್ದರು. 3 ವರ್ಷಗಳ ಹಿಂದೆ ಎಮ್ಮಾ ರಾಡುಕಾನು ಈ ಸಾಧನೆ ಮಾಡಿದ್ದರು.