ವಿಶ್ವಕಪ್ ಜಯಿಸಿದ್ದಕ್ಕೆ ಭಾರತೀಯರ ಕ್ಷಮೆಕೋರಿದ ಆಸ್ಟ್ರೇಲಿಯ ಆಟಗಾರ ಡೇವಿಡ್ ವಾರ್ನರ್!
Photo Credit: PTI
ಹೊಸದಿಲ್ಲಿ : ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನೀಡಿರುವ ಅಮೋಘ ಪ್ರದರ್ಶನ ಹಾಗೂ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಾರತದ ಚಲನಚಿತ್ರ ಕೇಂದ್ರಿತ ಪೋಸ್ಟ್ಗಳಿಗಾಗಿ ಭಾರತದಲ್ಲಿ ಅಚ್ಚುಮೆಚ್ಚಿನ ಆಟಗಾರನಾಗಿರುವ ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಆಸ್ಟ್ರೇಲಿಯ ವಿಶ್ವಕಪ್ ಗೆದ್ದಿರುವುದಕ್ಕೆ ಭಾರತೀಯರ ಕ್ಷಮೆಕೋರಿದ್ದಾರೆ.
ವಾರ್ನರ್ ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ಭಾರತೀಯ ಪ್ರೇಕ್ಷಕರಿಗೆ ಪ್ರಿಯರಾಗಿದ್ದಾರೆ. ಅಭಿಮಾನಿಗಳೊಂದಿಗೆ ತನ್ನ ಚಿತ್ರಗಳನ್ನು ಕ್ಲಿಕ್ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಅವರ ಮೈದಾನದೊಳಗಿನ ವರ್ತನೆಯು ಭಾರತೀಯರ ಪ್ರೇಕ್ಷಕರಿಂದ ಚಪ್ಪಾಳೆ ಹಾಗೂ ಹರ್ಷೋದ್ಗಾರಗಳನ್ನು ಸೆಳೆಯಲು ಎಂದಿಗೂ ವಿಫಲವಾಗಿಲ್ಲ.
ಆಸ್ಟ್ರೇಲಿಯವು ವಿಶ್ವಕಪ್ ಗೆದ್ದ ನಂತರ ವಾರ್ನರ್ x ನಲ್ಲಿ ನೀಡಿರುವ ಪ್ರತಿಕ್ರಿಯೆ ಭಾರೀ ಸದ್ದು ಮಾಡುತ್ತಿದೆ. ವಾರ್ನರ್ ಕೋಟ್ಯಂತರ ಹೃದಯಗಳನ್ನು ಚೂರು ಮಾಡಿದ್ದಾರೆ ಎಂದು x ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ವಾರ್ನರ್, ನಾನು ಕ್ಷಮೆಯಾಚಿಸುತ್ತೇನೆ. ಇದೊಂದು ಉತ್ತಮ ಆಟವಾಗಿತ್ತು. ವಾತಾವರಣವು ನಂಬಲಸಾಧ್ಯವಾಗಿತ್ತು. ಭಾರತವು ನಿಜವಾಗಿಯೂ ಗಂಭೀರ ಟೂರ್ನಿ ಆಯೋಜಿಸಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
2023ರ ವಿಶ್ವಕಪ್ನಲ್ಲಿ ವಾರ್ನರ್ 11 ಪಂದ್ಯಗಳಲ್ಲಿ ಒಟ್ಟು 535 ರನ್ ಗಳಿಸುವ ಮೂಲಕ ಆಸ್ಟ್ರೇಲಿಯದ ಪರ ಗರಿಷ್ಠ ರನ್ ಗಳಿಸಿದ್ದರು. ವಿಶ್ವಕಪ್ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದಾರೆ.
ಅಸಾಧಾರಣ ಫೀಲ್ಡಿಂಗ್ ಹಾಗೂ ಹರಿತವಾದ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯ ಎದುರಾಳಿ ತಂಡಗಳನ್ನು ನಿಯಂತ್ರಿಸಿತ್ತು. ಈ ಮೂಲಕ ಆಸೀಸ್ ಮೈದಾನದಲ್ಲಿ ಅತ್ಯಂತ ಪ್ರಬಲ ತಂಡವಾಗಿ ಹೊರಹೊಮ್ಮಿತು.
ಚಾಣಾಕ್ಷ ಫೀಲ್ಡರ್ ವಾರ್ನರ್ ಅವರು ಐಸಿಸಿ ಫೀಲ್ಡಿಂಗ್ ಇಂಪ್ಯಾಕ್ಟ್ ರೇಟಿಂಗ್ಸ್ನಲ್ಲಿ 82.55 ಅಂಕ ಗಳಿಸಿ 2ನೇ ಸ್ಥಾನ ಪಡೆದಿದ್ದಾರೆ. ವಾರ್ನರ್ 8 ಕ್ಯಾಚ್ಗಳನ್ನು ಪಡೆದಿದ್ದು, ಮೈದಾನದಲ್ಲಿ ಸುಮಾರು 23 ರನ್ ಉಳಿಸಿದ್ದಾರೆ.
ಭಾರತ ವಿರುದ್ಧ ಟ್ವೆಂಟಿ-20 ಸರಣಿಯಿಂದ ವಿಶ್ರಾಂತಿ ಪಡೆದ ಡೇವಿಡ್ ವಾರ್ನರ್
ಹೊಸದಿಲ್ಲಿ : ಆಸ್ಟ್ರೇಲಿಯದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಭಾರತ ವಿರುದ್ಧ ಮುಂಬರುವ ಟ್ವೆಂಟಿ-20 ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಆಸ್ಟ್ರೇಲಿಯವು ಏಕದಿನ ವಿಶ್ವಕಪ್ನಲ್ಲಿ ಜಯಶಾಲಿಯಾದ ನಂತರ ವಾರ್ನರ್ ತಂಡದಿಂದ ಹಿಂದೆ ಸರಿದಿದ್ದಾರೆ.
ಡಿಸೆಂಬರ್ 24 ರಿಂದ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಗಿಂತ ಮೊದಲು 37ರ ಹರೆಯದ ವಾರ್ನರ್ ಕೂಡ ಟಿ-20 ಸರಣಿಯಿಂದ ದೂರ ಉಳಿದು ಆಸ್ಟ್ರೇಲಿಯದ ಉಳಿದ ಆಟಗಾರರನ್ನು ಸೇರಿಕೊಂಡಿದ್ದಾರೆ.
ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ವೇಗದ ಬೌಲರ್ಗಳಾದ ಜೋಶ್ ಹೇಝಲ್ವುಡ್, ಮಿಚೆಲ್ ಸ್ಟಾರ್ಕ್, ಆಲ್ರೌಂಡರ್ಗಳಾದ ಕ್ಯಾಮರೂನ್ ಗ್ರೀನ್ ಹಾಗೂ ಮಿಚೆಲ್ ಮಾರ್ಷ್ ಅವರು ಸರಣಿಯಲ್ಲಿ ಗೈರಾಗಲಿರುವ ಪ್ರಮುಖ ಆಟಗಾರರಾಗಿದ್ದಾರೆ.
ಆಲ್ರೌಂಡರ್ ಆ್ಯರೊನ್ ಹಾರ್ಡಿ ಟ್ವೆಂಟಿ-20 ತಂಡವನ್ನು ಸೇರಿಕೊಂಡಿದ್ದಾರೆ. ಹೆಚ್ಚುವರಿಯಾಗಿ ಗಾಯಗೊಂಡಿರುವ ಸ್ಪೆನ್ಸರ್ ಜಾನ್ಸನ್ ಬದಲಿಗೆ ಕೇನ್ ರಿಚರ್ಡ್ಸನ್ ತಂಡವನ್ನು ಸೇರಿಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಸ್ಟ್ಟ್ ಸರಣಿಯ ಮೂಲಕ ನನ್ನ ಟೆಸ್ಟ್ ವೃತ್ತಿಜೀವನವನ್ನು ಅಂತ್ಯಗೊಳಿಸಬಹುದು ಎಂದು ಈ ವರ್ಷಾರಂಭದಲ್ಲಿ ವಾರ್ನರ್ ಹೇಳಿದ್ದರು. ಆದಾಗ್ಯೂ ಅವರು ಸೀಮಿತ ಓವರ್ ಕ್ರಿಕೆಟ್ನಲ್ಲಿ ಭಾಗವಹಿಸುವುದನ್ನು ಮುಂದುವರಿಸಲು ದೃಢ ನಿಶ್ಚಯ ಮಾಡಿದ್ದಾರೆ.
ಎಡಗೈ ಬ್ಯಾಟರ್ ವಾರ್ನರ್ ಕೊನೆಯ ಏಕದಿನ ವಿಶ್ವಕಪ್ ಆಡಿರಬಹುದು ಎಂದು ಸೂಚಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ವಾರ್ನರ್, ನಾನು ಕೊನೆಯ ವಿಶ್ವಕಪ್ ಆಡಿದ್ದೇನೆ ಎಂದು ಯಾರು ಹೇಳಿದ್ದಾರೆ ಎಂದು ಬರೆದಿದ್ದಾರೆ.
ನವೆಂಬರ್ 19ರಂದು ಏಕದಿನ ವಿಶ್ವಕಪ್ ಫೈನಲ್ ನಡೆದ ಬೆನ್ನಿಗೇ ನಿಗದಿಯಾಗಿರುವ ಮುಂಬರುವ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಟಿ-20 ಸರಣಿಯು ಮುಂಬರುವ ಟಿ-20 ವಿಶ್ವಕಪ್ಗೆ ಪೂರ್ವತಯಾರಿಯಾಗಿದೆ ಎಂದು ಪರಿಗಣಿಸಲಾಗಿದೆ. ಮುಂದಿನ ವರ್ಷ ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ಗೆ ಮೊದಲು ಆಸ್ಟ್ರೇಲಿಯವು ಇನ್ನೂ ಆರು ಟ್ವೆಂಟಿ-20 ಸರಣಿಗಳನ್ನು ಆಡಲಿದೆ.
ನ.23ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ 35 ರ ಹರೆಯದ ವಿಕೆಟ್ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.