ಐಸಿಸಿ ಎದುರು ದಿಟ್ಟತನ ಪ್ರದರ್ಶಿಸಿದ ಉಸ್ಮಾನ್ ಖ್ವಾಜಾರನ್ನು ಪ್ರಶಂಸಿಸಿದ ಆಸ್ಟ್ರೇಲಿಯಾ ಪ್ರಧಾನಿ
ಆ್ಯಂಥೋನಿ ಅಲ್ಬನೀಸ್, ಉಸ್ಮಾನ್ ಖ್ವಾಜಾ | Photo: Photo: AP/AFP
ಮೆಲ್ಬೋರ್ನ್: ಫೆಲೆಸ್ತೀನ್ ಮತ್ತು ಇಸ್ರೇಲ್ ಸಂಘರ್ಷದಿಂದ ಸಂತ್ರಸ್ತರಾಗಿರುವವರ ಪರ ತಮ್ಮ ಬೆಂಬಲ ಸೂಚಿಸಿದ ಕಾರಣಕ್ಕೆ ಐಸಿಸಿಯೊಂದಿಗೆ ಉದ್ಭವವಾಗಿರುವ ಬಿಕ್ಕಟ್ಟಿನ ಸಮಯದಲ್ಲಿ ಉಸ್ಮಾನ್ ಖ್ವಾಜಾ ತೋರಿದ ದಿಟ್ಟತನವನ್ನು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಪ್ರಶಂಸಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಆದ ಉಸ್ಮಾನ್ ಖ್ವಾಜಾ ಅವರಿಗೆ ಸಮಾನತೆ ಹಾಗೂ ಸ್ವಾತಂತ್ರ್ಯದ ಸಂದೇಶಗಳನ್ನು, ನಿರ್ದಿಷ್ಟವಾಗಿ ಪಾರಿವಾಳ ಸಂಕೇತ ಹಾಗೂ ತಮ್ಮ ಶೂಗಳ ಮೇಲೆ ಆಲಿವ್ ಎಲೆಗಳನ್ನು ಪ್ರದರ್ಶಿಸುವುದಕ್ಕೆ ಐಸಿಸಿ ನಿರ್ಬಂಧ ವಿಧಿಸಿದೆ.
ಈ ನಿರ್ಧಾರವನ್ನು ವೈಯಕ್ತಿಕ ಸಂದೇಶಗಳನ್ನು ತಮ್ಮ ಸಮವಸ್ತ್ರಗಳ ಮೇಲೆ ಪ್ರದರ್ಶಿಸುವುದನ್ನು ನಿರ್ಬಂಧಿಸಿರುವ ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಆಧರಿಸಿ ಕೈಗೊಳ್ಳಲಾಗಿದೆ. ಆದರೆ, ಉಸ್ಮಾನ್ ಖ್ವಾಜಾ ಅವರ ವರ್ತನೆಯು ಆಸ್ಟ್ರೇಲಿಯಾದ ಪ್ರಧಾನಿಯವರ ಪ್ರಶಂಸೆಗೆ ಪಾತ್ರವಾಗಿದೆ.
“ಮಾನವೀಯ ಮೌಲ್ಯಗಳ ಪರವಾಗಿ ಕ್ವಾಜಾ ತೋರಿರುವ ಧೈರ್ಯಕ್ಕೆ,ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ” ಎಂದು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಹೇಳಿದ್ದಾರೆ.