ಪಾಕ್ ಏಕದಿನ, ಟಿ-20 ತಂಡದ ನಾಯಕತ್ವ ತ್ಯಜಿಸಿದ ಬಾಬರ್ ಆಝಮ್
ಬಾಬರ್ ಆಝಮ್ | Photo: NDTV
ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ಏಕದಿನ ಮತ್ತು ಟಿ20 ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಬಾಬರ್ ಆಝಮ್ ಬಿಳಿ ಚೆಂಡು ಪಂದ್ಯಗಳ ನಾಯಕತ್ವ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬುಧವಾರ ಮಧ್ಯರಾತ್ರಿ ಈ ಸಂಬಂಧ ಪೋಸ್ಟ್ ಮಾಡಿರುವ ಆಝಮ್ ತಮ್ಮ ಅಭಿಮಾನಿಗಳಿಗೆ, "ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡದ ನಾಯಕತ್ವ ತೊರೆಯಲು ನಿರ್ಧರಿಸಿದ್ದೇನೆ. ಪಿಸಿಬಿ ಹಾಗೂ ತಂಡದ ವ್ಯವಸ್ಥಾಪನಾ ತಂಡಕ್ಕೆ ಈ ಬಗ್ಗೆ ಕಳೆದ ತಿಂಗಳೇ ಮಾಹಿತಿ ನೀಡಲಾಗಿದೆ. ತಂಡವನ್ನು ಮುನ್ನಡೆಸುವುದು ನನಗೆ ದೊರಕಿದ ಗೌರವ. ಆದರೆ ತಂಡದ ನಾಯಕತ್ವ ತ್ಯಜಿಸಿ ನನ್ನ ವೈಯಕ್ತಿಕ ಆಟದ ಪಾತ್ರಕ್ಕೆ ಗಮನ ಹರಿಸಲು ಇದು ಸಕಾಲ" ಎಂದು ಹೇಳಿದ್ದಾರೆ.
"ನಾಯಕತ್ವ ಖಂಡಿತವಾಗಿಯೂ ಪ್ರತಿಫಲದ ಅನುಭವ ನೀಡುವಂಥದ್ದು; ಆದರೆ ಬಹಳಷ್ಟು ಕಾರ್ಯಬಾಹುಳ್ಯವನ್ನು ಸೇರಿಸುವಂಥದ್ದು" ಎಂದಿದ್ದಾರೆ.
"ನಾನು ನನ್ನ ಸಾಧನೆ ಬಗ್ಗೆ ಮತ್ತು ಬ್ಯಾಟಿಂಗ್ ಆಸ್ವಾದಿಸಲು ಹೆಚ್ಚಿನ ಆದ್ಯತೆ ನೀಡುತ್ತೇನೆ. ಜತೆಗೆ ನನ್ನ ಸಮಯವನ್ನು ಕುಟುಂಬದ ಜತೆ ಕಳೆಯುವುದು ನನಗೆ ಸಂತಸ ತರುವಂಥದ್ದು. ನಾಯಕತ್ವದಿಂದ ಕೆಳಗಿಳಿಯುವ ಮೂಲಕ, ನನ್ನ ಪಂದ್ಯಗಳ ಮೇಲೆ ಹೆಚ್ಚಿನ ಶಕ್ತಿ ವ್ಯಯಿಸಲು ಮತ್ತು ವೈಯಕ್ತಿಕ ಬೆಳವಣಿಗೆಗೆ ಗಮನ ಹರಿಸುತ್ತಿದ್ದೇನೆ ಎಂಬ ಸ್ಪಷ್ಟ ಸಂದೇಶ ನೀಡುತ್ತಿದ್ದೇನೆ" ಎಂದು ವಿವರಿಸಿದ್ದಾರೆ.
"ನನ್ನ ಮೇಲೆ ಅತೀವ ನಂಬಿಕೆ ಇರಿಸಿ, ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ನಾನು ಕೃತಜ್ಞ. ನಿಮ್ಮ ಪ್ರೋತ್ಸಾಹವೇ ನನ್ನ ಜಗತ್ತು. ನಾವೆಲ್ಲ ಜತೆ ಸೇರಿ ಮಾಡಿದ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ತಂಡಕ್ಕೆ ಒಬ್ಬ ಆಟಗಾರನಾಗಿ ಕೊಡುಗೆ ನೀಡುವುದನ್ನು ಮುಂದುವರಿಸಲು ಉತ್ಸುಕನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.