ಪಾಕಿಸ್ತಾನದ ಸೀಮಿತ ಓವರ್ ಕ್ರಿಕೆಟ್ ನಾಯಕನಾಗಿ ಬಾಬರ್ ಆಝಮ್ ಮರು ಆಯ್ಕೆ
ಬಾಬರ್ ಆಝಮ್ | Photo: NDTV
ಕರಾಚಿ: ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಗೆ ಮುಂಚಿತವಾಗಿ ತಂಡವನ್ನು ಹಳಿಗೆ ತರಲು ಯತ್ನಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಸತತವಾಗಿ ಬದಲಾವಣೆ ಮಾಡುತ್ತಿದ್ದು, ರವಿವಾರ ಬಾಬರ್ ಆಝಮ್ರನ್ನು ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕರನ್ನಾಗಿ ಮತ್ತೊಮ್ಮೆ ಆಯ್ಕೆ ಮಾಡಿದೆ.
2023ರಲ್ಲಿ ಭಾರತದಲ್ಲಿ ನಡೆದಿದ್ದ 50 ಓವರ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ ನಂತರ ಆಝಮ್ ಕಳೆದ ವರ್ಷ ನವೆಂಬರ್ನಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದಿದ್ದರು.
ಪಿಸಿಬಿಯ ಆಯ್ಕೆ ಸಮಿತಿಯ ಒಮ್ಮತದ ಶಿಫಾರಸಿನ ನಂತರ ಪಿಸಿಬಿ ಅಧ್ಯಕ್ಷ ನಖ್ವಿ ಅವರು ಆಝಮ್ರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಸೀಮಿತ ಓವರ್ ಕ್ರಿಕೆಟ್(ಟಿ20 ಹಾಗೂ ಏಕದಿನ)ನಾಯಕರನ್ನಾಗಿ ಆಯ್ಕೆ ಮಾಡಿದೆ ಎಂದು ಪಿಸಿಬಿ ಎಕ್ಸ್ನಲ್ಲಿ ತಿಳಿಸಿದೆ.
7 ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿಯು ವಾರದ ಹಿಂದೆ ಸಭೆ ಸೇರಿ ನಾಯಕ ಶಾಹೀನ್ ಶಾ ಅಫ್ರಿದಿ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವ ಕುರಿತು ಶಿಫಾರಸು ಮಾಡಿತ್ತು.
ಪಾಕಿಸ್ತಾನ ತಂಡ ಕಳೆದ ವರ್ಷ ಏಕದಿನ ವಿಶ್ವಕಪ್ನಲ್ಲಿ ಸೆಮಿ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ನಂತರ ಆಝಮ್ ಎಲ್ಲ ಮಾದರಿ ಕ್ರಿಕೆಟಿನ ನಾಯಕತ್ವವನ್ನು ತ್ಯಜಿಸಿದ್ದರು. ಶಾನ್ ಮಸೂದ್ ಟೆಸ್ಟ್ ನಾಯಕನಾಗಿ ಹಾಗೂ ಶಾಹೀನ್ ಶಾ ಅಫ್ರಿದಿ ಟಿ20 ತಂಡದ ನಾಯಕನಾಗಿ ಆಯ್ಕೆಯಾಗಿದ್ದರು.
ಮುಖ್ಯ ಕೋಚ್ ಮಿಕಿ ಅರ್ಥರ್ ಬದಲಿಗೆ ಮುಹಮ್ಮದ್ ಹಫೀಝ್ ಟೀಮ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಪಾಕಿಸ್ತಾನ ಕ್ರಿಕೆಟ್ ತಂಡ ಅಮೆರಿಕ ಹಾಗೂ ವಿಂಡೀಸ್ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ನಲ್ಲಿ ಭಾಗವಹಿಸುವ ಮೊದಲು ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಹಾಗೂ ಐರ್ಲ್ಯಾಂಡ್ ನಲ್ಲಿ 2 ಹಾಗೂ ಇಂಗ್ಲೆಂಡ್ ನಲ್ಲಿ 4 ಪಂದ್ಯಗಳನ್ನು ಆಡಲಿದೆ.