ಏಶ್ಯ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಫೈನಲ್ ಗೆ ಪ್ರವೇಶಿಸಿದ ಭಾರತೀಯ ಮಹಿಳಾ ತಂಡ
ಸೆಮಿ ಫೈನಲ್ ನಲ್ಲಿ ಜಪಾನ್ ವಿರುದ್ಧ ರೋಚಕ ಜಯ
Image Source : BADMINTON ASSOCIATION OF INDIA
ಶಾ ಆಲಂ: ಭಾರತದ ಮಹಿಳಾ ತಂಡ ಕನಸಿನ ಓಟವನ್ನು ಮುಂದುವರಿಸಿದ್ದು ಏಶ್ಯ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ ಗೆ ಪ್ರವೇಶಿಸಿದೆ.
ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿಯರು ಶನಿವಾರ ರೋಚಕವಾಗಿ ಸಾಗಿದ ಸೆಮಿ ಫೈನಲ್ ನಲ್ಲಿ ಎರಡು ಬಾರಿಯ ಮಾಜಿ ಚಾಂಪಿಯನ್ ಜಪಾನ್ ತಂಡವನ್ನು 3-2 ಅಂತರದಿಂದ ಸೋಲಿಸಿದ್ದಾರೆ.
ವಿಶ್ವದ ನಂ.23ನೇ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್, ವಿಶ್ವದ ನಂ.53ನೇ ಆಟಗಾರ್ತಿ ಅಶ್ಮಿತಾ ಚಲಿಹಾ ಹಾಗೂ 17ರ ಹರೆಯದ ಅನ್ಮೋಲ್ ಖರ್ಬ್ ಎರಡು ಡಬಲ್ಸ್ ಹಾಗೂ ಒಂದು ಸಿಂಗಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸಿ ಭಾರತವನ್ನು ಫೈನಲ್ ಗೆ ತಲುಪಿಸಿದರು.
ಭಾರತವು ರವಿವಾರ ನಡೆಯಲಿರುವ ಫೈನಲ್ ನಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.
ಜಪಾನ್ ತಂಡವು ವಿಶ್ವದ ನಂ.4ನೇ ಆಟಗಾರ್ತಿ ಅಕಾನೆ ಯಮಗುಚಿ ಅನುಪಸ್ಥಿತಿಯಲ್ಲಿ ಪ್ರಸಕ್ತ ಟೂರ್ನಿಯಲ್ಲಿ ಆಡುತ್ತಿದೆ. ವಿಶ್ವದ ನಂ.7ನೇ ಜೋಡಿ ಯುಕಿ ಫುಕುಶಿಮಾ ಹಾಗೂ ಸಯಕಾ ಹಿರೊಟಾ ಹಾಗೂ ವಿಶ್ವದ ನಂ.8ನೇ ಜೋಡಿ ಮಯು ಮಟ್ಸುಮೊಟೊ ಹಾಗೂ ವಕಾನಾ ನಗಹರಾ ಅವರೊಂದಿಗೆ ಭಾರತದ ವಿರುದ್ಧ ಹೋರಾಟ ನಡೆಸಿದೆ.
ದೀರ್ಘ ಸಮಯದಿಂದ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಹಿರಿಯ ಆಟಗಾರ್ತಿ ಪಿ.ವಿ.ಸಿಂಧು ಟೂರ್ನಿಯಲ್ಲಿ ಚೀನಾದ ಹ್ಯಾನ್ ಯು ಹಾಗೂ ಹಾಂಕಾಂಗ್ ನ ಲೊ ಸಿನ್ ಯಾನ್ ಹ್ಯಾಪ್ಪಿ ವಿರುದ್ಧ ಜಯ ಸಾಧಿಸಿದ್ದರು. ಆದರೆ ಶನಿವಾರ ಎಡಗೈ ಆಟಗಾರ್ತಿ ಅಯಾ ಒಹೊರಿ ವಿರುದ್ಧ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ 13-21, 20-22 ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ಮೊದಲ ಡಬಲ್ಸ್ ಪಂದ್ಯವನ್ನಾಡಿದ ಟ್ರೀಸಾ ಹಾಗೂ ಗಾಯತ್ರಿ ವಿಶ್ವದ ನಂ.6ನೇ ಜೋಡಿ ನಮಿ ಮಟ್ಸುಯಾಮಾ ಹಾಗೂ ಚಿಹಾರು ಶಿದಾ ವಿರುದ್ಧ 73 ನಿಮಿಷಗಳ ಹೋರಾಟದಲ್ಲಿ 21-17, 16-21, 22-20 ಗೇಮ್ ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಭಾರತವು 1-1ರಿಂದ ಸಮಬಲ ಸಾಧಿಸಿತು.
ಮಾಜಿ ವಿಶ್ವ ಚಾಂಪಿಯನ್ ನರೊಮಿ ಒಕುಹರಾ ವಿರುದ್ಧ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.20ನೇ ಆಟಗಾರ್ತಿ ಅಶ್ಮಿತಾ ಆಕ್ರಮಣಕಾರಿ ಗೇಮ್ ಆಡಿದರು. 21-17, 21-14 ನೇರ ಗೇಮ್ ಗಳ ಅಂತರದಿಂದ ಜಯ ಸಾಧಿಸಿ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು.
ತನಿಶಾ ಕ್ರಾಸ್ಟೊ ಗಾಯಗೊಂಡ ಕಾರಣ ಸಿಂಧು ಅವರು ಅಶ್ವಿನಿ ಪೊನ್ನಪ್ಪರೊಂದಿಗೆ ಡಬಲ್ಸ್ ಪಂದ್ಯವನ್ನು ಆಡಿದರು. 43 ನಿಮಿಷಗಳ ಕಾಲ ನಡೆದ ಡಬಲ್ಸ್ ಪಂದ್ಯದಲ್ಲಿ ಸಿಂಧು ಹಾಗೂ ಅಶ್ವಿನಿ ವಿಶ್ವದ ನಂ.11ನೇ ಜೋಡಿ ರೆನಾ ಮಿಯೌರಾ ಹಾಗೂ ಅಯಾಕಾ ಸಕುರಾಮೊಟೊ ವಿರುದ್ಧ 14-21, 11-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ಐದು ಪಂದ್ಯಗಳ ಹೋರಾಟವು 2-2ರಿಂದ ಸಮಬಲಗೊಂಡಾಗ ಯುವ ಆಟಗಾರ್ತಿ ಅನ್ಮೋಲ್ ಗೆ ವಿಶ್ವದ ನಂ.29ನೇ ಆಟಗಾರ್ತಿ ನಟ್ಸುಕಿ ನಿಡೈರಾ ವಿರುದ್ಧ ಜಯ ಸಾಧಿಸುವ ಗುರುತರ ಜವಾಬ್ದಾರಿ ಲಭಿಸಿತು. ಭಾರತದ ಆಟಗಾರ್ತಿ ಮತ್ತೊಮ್ಮೆ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ 52 ನಿಮಿಷಗಳ ಹೋರಾಟದಲ್ಲಿ ನಟ್ಸುಕಿ ಅವರನ್ನು 21-14, 21-18 ಅಂತರದಿಂದ ಮಣಿಸಿದರು. ಇದರೊಂದಿಗೆ ಭಾರತಕ್ಕೆ 3-2 ಅಂತರದಿಂದ ರೋಚಕ ಜಯ ತಂದುಕೊಟ್ಟರು.
ಫೈನಲ್ ನಲ್ಲಿ ಕಾಣಿಸಿಕೊಂಡಿರುವ ಭಾರತವು ಇದೇ ಮೊದಲ ಬಾರಿ ಕಾಂಟಿನೆಂಟಲ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದೆ. ಭಾರತವು 2016 ಹಾಗೂ 202ರ ಆವೃತ್ತಿಗಳಲ್ಲಿ ಪುರುಷರ ಟೀಮ್ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕವನ್ನು ಜಯಿಸಿತ್ತು.