ಬ್ಯಾಡ್ಮಿಂಟನ್: ವಿಶಿಷ್ಟ ರಾಷ್ಟ್ರೀಯ ದಾಖಲೆ ನಿರ್ಮಿಸಲು ಸಜ್ಜಾದ ಸೇನ್ ಸಹೋದರರಾದ ಲಕ್ಷ್ಯ, ಚಿರಾಗ್
Photo: @lakshya_sen
ಜಕಾರ್ತ: ಮಲೇಶ್ಯದ ಶಾ ಆಲಂನಲ್ಲಿ ಫೆಬ್ರವರಿ 13ರಿಂದ 19ರ ತನಕ ನಡೆಯಲಿರುವ ಏಶ್ಯ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಸೇನ್ ಸಹೋದರರಾದ ಲಕ್ಷ್ಯ ಹಾಗೂ ಚಿರಾಗ್ ವಿಶಿಷ್ಟ ರಾಷ್ಟ್ರೀಯ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.
ವಿಶ್ವ ಮಟ್ಟದ ಯಾವುದೇ ಪ್ರಮುಖ ಟೂರ್ನಮೆಂಟ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತೀಯ ಬ್ಯಾಡ್ಮಿಂಟನ್ನಲ್ಲಿ ಇಬ್ಬರು ಸಹೋದರರು ಸೀನಿಯರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ಕೆಲವು ದಶಕಗಳಲ್ಲಿ ರಾಷ್ಟ್ರೀಯ ತಂಡಗಳಲ್ಲಿ ಆಡಿರುವ ಸಹೋದರರ ಪೈಕಿ ಸಮೀರ್ ಹಾಗೂ ಸೌರಭ್ ವರ್ಮಾ, ಪ್ರಥುಲ್ ಹಾಗೂ ಆದಿತ್ಯ ಜೋಶಿ, ಕಿಡಂಬಿ ಶ್ರೀಕಾಂತ್ ಹಾಗೂ ಕೆ. ನಂದಗೋಪಾಲ್ ಸೇರಿದ್ದಾರೆ. ಆದರೆ ಇಬ್ಬರು ಸಹೋದರರು ಸೀನಿಯರ್ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿಲ್ಲ.
ಹಿರಿಯ ಸಹೋದರ, 25ರ ಹರೆಯದ ಚಿರಾಗ್ ಕಳೆದ ತಿಂಗಳು ಗುವಾಹಟಿಯಲ್ಲಿ ಪುರುಷರ ಸಿಂಗಲ್ಸ್ ರಾಷ್ಟ್ರೀಯ ಚಾಂಪಿಯನ್ ಆಗುವ ಮೂಲಕ ಬೆಳಕಿಗೆ ಬಂದಿದ್ದರು. ಸದ್ಯ ವಿಶ್ವ ರ್ಯಾಂಕಿಂಗ್ ನಲ್ಲಿ 97ನೇ ಸ್ಥಾನದಲ್ಲಿದ್ದರೂ ಗುವಾಹಟಿ ಚಾಂಪಿಯನ್ ಆದ ಕಾರಣ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
22ರ ಹರೆಯದ ವಿಶ್ವದ ನಂ.6ನೇ ಆಟಗಾರ ಲಕ್ಷ್ಯ ಸೇನ್ ಕಳೆದ ಕೆಲವು ವರ್ಷಗಳಿಂದ ಭಾರತದ ಸೀನಿಯರ್ ತಂಡದ ಖಾಯಂ ಸದಸ್ಯರಾಗಿದ್ದಾರೆ.
ತನ್ನ ಇಬ್ಬರು ಪುತ್ರರು ರಾಷ್ಟ್ರೀಯ ತಂಡದಲ್ಲಿ ಒಟ್ಟಿಗೆ ಆಡಬೇಕೆಂಬ ಡಿ.ಕೆ. ಸೇನ್ ಅವರ ಕನಸು ಈಡೇರಿದೆ.
15 ವರ್ಷಗಳ ಹಿಂದೆ ಇಬ್ಬರಿಗೂ ತರಬೇತಿ ನೀಡಲಾರಂಭಿಸಿದಾಗ ಭಾರತದ ಹಿರಿಯರ ತಂಡದಲ್ಲಿ ನನ್ನ ಇಬ್ಬರು ಮಕ್ಕಳು ಒಟ್ಟಿಗೆ ಆಡಬೇಕೆಂದು ಕನಸು ಕಂಡಿದ್ದೆ. ತಂದೆಯಾಗಿ ನಾನು ಇದಕ್ಕಿಂತ ಹೆಚ್ಚು ನಿರೀಕ್ಷೆ ಮಾಡುವುದಿಲ್ಲ. ಇದೊಂದು ರಾಷ್ಟ್ರೀಯ ದಾಖಲೆಯೋ, ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ರಾಷ್ಟ್ರೀಯ ತಂಡದಲ್ಲಿ ಇಬ್ಬರು ಸಹೋದರರು ಆಡುತ್ತಿರುವುದು ಮಾತ್ರ ಅಪರೂಪದ ಕ್ಷಣವಾಗಿದೆ ಎನ್ನುವುದು ಖಚಿತ ಎಂದು ಡಿ.ಕೆೆ ಸೇನ್ ಹೇಳಿದ್ದಾರೆ.
ಸ್ವತಃ ಹೆಸರಾಂತ ತರಬೇತುದಾರರಾಗಿರುವ ಡಿ.ಕೆ. ಸೇನ್ ಅವರು ಉತ್ತರಾಖಂಡದ ಅಲ್ಮೋರಾದಲ್ಲಿ ತಮ್ಮ ಮಕ್ಕಳನ್ನು ಬ್ಯಾಡ್ಮಿಂಟನ್ ಗೆ ಪರಿಚಯಿಸಿದ್ದರು. ಈ ಇಬ್ಬರು ಸಹೋದರರು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ತರಬೇತಿ ಪಡೆಯುತ್ತಿದ್ದಾರೆ. ಡಿ.ಕೆ. ಸೇನ್ ಇಲ್ಲಿರುವ ಕೋಚ್ಗಳಲ್ಲಿ ಒಬ್ಬರಾಗಿದ್ದಾರೆ.
ಚಿರಾಗ್ ಹಾಗೂ ಲಕ್ಷ್ಯ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲಾರಂಭಿಸಿದಾಗ ನನ್ನ ಸುತ್ತಮುತ್ತಲಿನ ಜನರು ಅವರನ್ನು ಸ್ಟೀವ್ ಹಾಗೂ ಮಾರ್ಕ್ವಾ ಎಂದು ಕರೆಯುತ್ತಿದ್ದರು. ವಾ ಸಹೋದರರು ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದಂತೆ ಚಿರಾಗ್ ಹಾಗೂ ಲಕ್ಷ್ಯ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ನನ್ನ ಸ್ನೇಹಿತರು ಹೇಳುತ್ತಿದ್ದರು. ನನ್ನ ಮಕ್ಕಳ ಬಗ್ಗೆ ನನಗೆ ಹೆಮ್ಮೆ ಇದೆ. ಲಕ್ಷ್ಯ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ, ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಜಯಿಸಿದಾಗ ಲಕ್ಷ್ಯ ಸೇನ್, ಚಿರಾಗ್ಗಿಂತ ಮುಂದಿದ್ದಾನೆ ಎಂದು ಎಲ್ಲರು ಹೇಳುತ್ತಿದ್ದರು. ಚಿರಾಗ್ ಒಂದು ದಿನ ತನ್ನ ಪ್ರತಿಭೆ ತೋರಿಸುತ್ತಾನೆ ಎಂಬ ನಂಬಿಕೆ ನನಗಿತ್ತು ಎಂದು ಡಿ.ಕೆ. ಸೇನ್ ಹೇಳಿದ್ದಾರೆ.