ವಿನೇಶ್ ಫೋಗಟ್ ಅವರ ಧೈರ್ಯ ಹಾಗೂ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ಬಜರಂಗ್ ಪುನಿಯಾ
Photo credit: PTI
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ ಅವರ ಧೈರ್ಯ ಹಾಗೂ ಪ್ರಾಮಾಣಿಕತೆಯನ್ನು ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಬಜರಂಗ್ ಪುನಿಯಾ ಶ್ಲಾಘಿಸಿದ್ದಾರೆ.
ವಿನೇಶ್ ಅವರೇ ನೀವು ಧೈರ್ಯ ಹಾಗೂ ನೈತಿಕತೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದೀರಿ. ನೀವು ತುಂಬಾ ಧೈರ್ಯದಿಂದ ಹೋರಾಡಿದ್ದೀರಿ. ನಿನ್ನೆ ಒಲಿಂಪಿಕ್ಸ್ ಅಧಿಕಾರಿಗಳು ನಿಮ್ಮನ್ನು ತೂಕ ಮಾಡಿದ್ದಾಗ ನಿಮ್ಮ ತೂಕ ಪರಿಪೂರ್ಣವಾಗಿತ್ತು. ಇಂದು ಬೆಳಗ್ಗೆ ಆಗಿರುವ ಘಟನೆಯನ್ನು ಯಾರೂ ನಂಬಲು ಸಾಧ್ಯವಾಗುತ್ತಿಲ್ಲ. ನಿಮಗೆ ಹೀಗಾಗಿದೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಇಡೀ ದೇಶ ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲು ಅಶಕ್ತವಾಗಿದೆ. ಎಲ್ಲ ದೇಶಗಳ ಒಲಿಂಪಿಕ್ಸ್ ಪದಕಗಳು ಒಂದಡೆಯಾದರೆ, ನಿಮ್ಮ ಪದಕ ಮತ್ತೊಂದೆಡೆ ಇದೆ ಎಂದು ಪುನಿಯಾ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ನಿಮಗಾಗಿ ಪ್ರಾರ್ಥಿಸುತ್ತಿದ್ದಾರೆ. ಜಗತ್ತಿನ ಪ್ರತಿಯೊಬ್ಬ ಮಹಿಳೆಯೂ ಈ ಪದಕವನ್ನು ವೈಯಕ್ತಿಕ ಪದಕವೆಂದು ಭಾವಿಸಿದ್ದಾರೆ. ಪ್ರಪಂಚದ ಎಲ್ಲ ಮಹಿಳೆಯರ ಈ ಧ್ವನಿಗಳು ಸರಿಯಾದ ಸ್ಥಳವನ್ನು ತಲುಪಲಿ ಎಂದು ನಾನು ಹಾರೈಸುವೆ. ಒಲಿಂಪಿಕ್ಸ್ನಲ್ಲಿ ಆಡುತ್ತಿರುವ ಎಲ್ಲ ಮಹಿಳಾ ಕುಸ್ತಿಪಟುಗಳು ವಿನೇಶ್ರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತಾರೆಂಬ ವಿಶ್ವಾಸ ನನಗಿದೆ ಎಂದು ಬಜರಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಗ್ರ ರ್ಯಾಂ ಕಿನ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಕೂಡ ವಿನೇಶ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿನೇಶ್ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಅವರ ಅಮೋಘ ಕೌಶಲ್ಯವನ್ನು ಉಲ್ಲೇಖಿಸಿರುವ ಸಿಂಧು, ಅವರನ್ನು ಚಾಂಪಿಯನ್ ಆಟಗಾರ್ತಿ ಎಂದು ಬಣ್ಣಿಸಿದ್ದಾರೆ.
ಬ್ಯಾಡ್ಮಿಂಟನ್ ತಾರೆಯ ಪ್ರೋತ್ಸಾಹದ ನುಡಿಗಳು ಸವಾಲಿನ ಸಮಯವನ್ನು ಎದುರಿಸುತ್ತಿರುವ ವಿನೇಶ್ಗೆ ಸ್ಪೂರ್ತಿ ತುಂಬಲಿದೆ.
ಪ್ರೀತಿಯ ವಿನೇಶ್ ಫೋಗಟ್, ನೀವು ಯಾವಾಗಲೂ ನಮ್ಮ ದೃಷ್ಟಿಯಲ್ಲಿ ಚಾಂಪಿಯನ್ ಆಗಿರುತ್ತೀರಿ. ನೀವು ಚಿನ್ನ ಗೆಲ್ಲುತ್ತೀರೆಂಬ ಭಾರೀ ವಿಶ್ವಾಸ ನನಗಿತ್ತು. ನಾವು ನಿಮ್ಮೊಂದಿಗೆ ಯಾವಾಗಲೂ ಇರುತ್ತೇವೆ ಎಂದು ಸಿಂಧು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.