ಚೆಂಡು ವಿರೂಪ ಆರೋಪ: ಇಂಝಮಮ್ ಗೆ ರೋಹಿತ್ ತಿರುಗೇಟು
PC: PTI
ಹೊಸದಿಲ್ಲಿ: ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಹಂತದ ಪಂದ್ಯದಲ್ಲಿ ಭಾರತೀಯ ಆಟಗಾರರು ಚೆಂಡು ವಿರೂಪಗೊಳಿಸಿರುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಝಮಮ್ ಉಲ್ ಹಕ್ ಅವರ ಆರೋಪಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿ ಚೆಂಡು ರಿವರ್ಸ್ ಸ್ವಿಂಗ್ ಪಡೆಯದಿದ್ದರೆ, ಮತ್ತೆಲ್ಲಿ ಪಡೆಯಲು ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಭಾರತೀಯ ತಂಡ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ನಲ್ಲಿ ಆಡುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆಟದ 15ನೇ ಓವರ್ ನಲ್ಲೇ ಚೆಂಡು ರಿವರ್ಸ್ ಸ್ವಿಂಗ್ ಪಡೆದ ಬಗ್ಗೆ ಇಂಝಮಮ್ ಅನುಮಾನ ವ್ಯಕ್ತಪಡಿಸಿ, "ಚೆಂಡು ವಿರೂಪಗೊಳಿಸುವ ಗಂಭೀರ ಕೆಲಸ ನಡೆದಿದೆ" ಎಂಬ ಆರೋಪ ಮಾಡಿದ್ದರು.
ಅರ್ಷದೀಪ್ 15ನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ, ಚೆಂಡ್ ರಿವರ್ಸ್ಸ್ವಿಂಗ್ ಪಡೆಯುತ್ತಿತ್ತು. ಹೊಸ ಚೆಂಡು ಅಷ್ಟು ಬೇಗ ರಿವರ್ಸ್ ಸ್ವಿಂಗ್ ಪಡೆಯವುದು ಹೇಗೆ ಸಾಧ್ಯ? ಅಂದರೆ 12 ಅಥವಾ 13ನೇ ಓವರ್ ಗೇ ಚೆಂಡು ರಿವರ್ಸ್ ಸ್ವಿಂಗ್ ಪಡೆಯಲು ಆರಂಭಿಸಿತ್ತು ಎಂಬ ಅರ್ಥ. ಈ ಅಂಶಗಳ ಬಗ್ಗೆ ಅಂಪೈರ್ ಗಳು ಕಣ್ಣಿಡಬೇಕು. ಒಂದು ವೇಳೆ ಪಾಕಿಸ್ತಾನಿ ಬೌಲರ್ ಗಳು ರಿವರ್ಸ್ ಸ್ವಿಂಗ್ ಪಡೆದಿದ್ದರೆ ಅದು ದೊಡ್ಡ ವಿವಾದವಾಗುತ್ತಿತ್ತು. ರಿವರ್ಸ್ ಸ್ವಿಂಗ್ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಅರ್ಷದೀಪ್ 15ನೇ ಓವರ್ ನಲ್ಲಿ ಬಂದು ಚೆಂಡು ರಿವರ್ಸ್ ಸ್ವಿಂಗ್ ಪಡೆಯುವಂತೆ ಮಾಡಿದರೆ, ಅದಕ್ಕೂ ಮುನ್ನ ಚೆಂಡಿನ ವಿಚಾರದಲ್ಲಿ ಗಂಭೀರ ಕೆಲಸ ನಡೆದಿದೆ ಎಂಬ ಅರ್ಥ" ಎಂದು ಇಂಝಮಮ್ ಪಾಕಿಸ್ತಾನಿ ಸುದ್ದಿವಾಹಿನಿಯಲ್ಲಿ ಹೇಳಿದ್ದರು.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಕದನಕ್ಕೆ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ರೋಹಿತ್, "ನಾನು ಏನು ಹೇಳಬಹುದು, ಒರಟು ಮೇಲ್ಮೈ ಹಾಗೂ ತಾಪಮಾನ ನಿಮಗೆ ಕಾಣುವುದಿಲ್ಲವೇ? ಇದು ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಅಲ್ಲ. ಇಲ್ಲಿನ ವಾತಾವರಣಕ್ಕೆ ಚೆಂಡು 12-15ನೇ ಓವರ್ ನಲ್ಲೇ ರಿವರ್ಸ್ ಸ್ವಿಂಗ್ ಆಗುತ್ತದೆ. ಇದು ನಮಗೆ ಮಾತ್ರವಲ್ಲ ಎಲ್ಲ ತಂಡಗಳಿಗೂ ಆಗುತ್ತದೆ. ಕೆಲವೊಮ್ಮೆ ಜನ ತಮ್ಮ ಮನಸ್ಸನ್ನು ತೆರೆಯಬೇಕು ಮತ್ತು ಯೋಚಿಸಬೇಕು" ಎಂದು ಇಂಝಮಮ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.