ನಾಳೆ ಬೆಂಗಳೂರಿನಲ್ಲಿ ಮೊದಲ ಟೆಸ್ಟ್ ಆರಂಭ | ಭಾರತಕ್ಕೆ ನ್ಯೂಝಿಲ್ಯಾಂಡ್ ಎದುರಾಳಿ
ಬೆಂಗಳೂರು : ಆತಿಥೇಯ ಭಾರತ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಬುಧವಾರದಿಂದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದೆ. ಆದರೆ ಪ್ರತಿಷ್ಠಿತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಭಾರೀ ಮಳೆ ಭೀತಿ ಎದುರಾಗಿದೆ.
ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯದ ವಿರುದ್ಧ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ತಯಾರಿ ನಡೆಸುವ ಉದ್ದೇಶ ಹೊಂದಿರುವ ಭಾರತ ತಂಡಕ್ಕೆ ಈ ಸರಣಿಯು ಮುಖ್ಯವಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಇತ್ತೀಚೆಗೆ ಬಾಂಗ್ಲಾದೇಶ ವಿರುದ್ದದ 2 ಪಂದ್ಯಗಳ ಸರಣಿಯನ್ನು ಗೆದ್ದುಕೊಂಡು ಕ್ಲೀನ್‌ಸ್ವೀಪ್ ಸಾಧಿಸಿತ್ತು. ಚೆನ್ನೈ ಟೆಸ್ಟ್‌ನಲ್ಲಿ ಭಾರತ ತಂಡದ ಪ್ರತಿರೋಧ ಗುಣ ಕಂಡುಬಂದಿದ್ದರೆ, ಕಾನ್ಪುರ ಟೆಸ್ಟ್ ನಲ್ಲಿ ಬೌಲಿಂಗ್ ದಾಳಿಯನ್ನು ತಾನು ಸುಲಭವಾಗಿ ಎದುರಿಸುವುದಾಗಿ ತೋರಿಸಿಕೊಟ್ಟಿತ್ತು.
ನ್ಯೂಝಿಲ್ಯಾಂಡ್ ತಂಡ ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಸರಣಿಯನ್ನು 0-2 ಅಂತರದಿಂದ ಸೋತಿತ್ತು. ಪ್ರಸಕ್ತ ಸರಣಿಯ ಕೆಲವು ಪಂದ್ಯಗಳಿಂದ ಕೇನ್ ವಿಲಿಯಮ್ಸನ್ ಲಭ್ಯ ಇರುವುದಿಲ್ಲ. ಸ್ಟಾರ್ ಬ್ಯಾಟರ್ ವಿಲಿಯಮ್ಸನ್ ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಆದರೆ ಕಿವೀಸ್ ತಂಡದಲ್ಲಿ ಉತ್ತಮ ಆಟಗಾರರಿದ್ದು, ಆತಿಥೇಯರಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಉಭಯ ತಂಡಗಳ ಮೇಲೆ ಮಳೆರಾಯ ದಯೆ ತೋರಿದರೆ ರೋಚಕ ಪಂದ್ಯ ನಿರೀಕ್ಷಿಸಬಹುದು. ಪಂದ್ಯದ ಮೊದಲೆರಡು ದಿನದಾಟದಲ್ಲಿ ಮಳೆ ಭೀತಿ ಹೆಚ್ಚಾಗಿದೆ. ಆದರೆ ಬೆಂಗಳೂರಿನ ಕ್ರೀಡಾಂಗಣದಲ್ಲಿ ನೀರಿಗಿಂಸುವ ವ್ಯವಸ್ಥೆ ಅತ್ಯುತ್ತಮವಾಗಿದೆ.
ಅಕ್ಯುವೆದರ್ ಪ್ರಕಾರ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಮೊದಲ ಟೆಸ್ಟ್ ನ ಮೊದಲ ದಿನವಾದ ಬುಧವಾರ ಶೇ.90ರಷ್ಟು ಮಳೆ ಬರುವ ಸಾಧ್ಯತೆ ಇದೆ. ಗುರುವಾರ ಹಾಗೂ ಶುಕ್ರವಾರ ಮಳೆ ಬೀಳುವ ಸಾಧ್ಯತೆ ಶೇ.80ರಷ್ಟಿದೆ. ಶನಿವಾರ ಶೇ.25ರಷ್ಟು ಮಳೆ ಕಡಿಮೆಯಾಗಲಿದೆ. ಕೊನೆಯ ದಿನವಾದ ರವಿವಾರ ಮತ್ತೆ ಮಳೆ ಪ್ರಮಾಣ ಅಧಿಕವಾಗಲಿದೆ ಎಂದು ಅಕ್ಯುವೆದರ್ ತಿಳಿಸಿದೆ.
ಭಾರತವು 2024-25ರ ಡಬ್ಲ್ಯುಟಿಸಿ ಅಭಿಯಾನವನ್ನು ಅಂತ್ಯಗೊಳಿಸುವ ಮೊದಲು ಇನ್ನೂ 8 ಪಂದ್ಯಗಳನ್ನ ಆಡಲಿದೆ. ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯ ನಂತರ ಬಹು ನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ನಡೆಯಲಿದೆ. ಇದನ್ನು ಮೊದಲ ಬಾರಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನಾಗಿ ಆಡಲಾಗುತ್ತಿದೆ. ಡಬ್ಲ್ಯುಟಿಸಿ ಫೈನಲ್ ಪಂದ್ಯವು ಮುಂದಿನ ವರ್ಷ ಜೂನ್‌ನಲ್ಲಿ ಲಾರ್ಡ್ಸ್ ನಲ್ಲಿ ಆಡಲಾಗುತ್ತದೆ.
ಶುಭಮನ್ ಗಿಲ್‌ಗೆ ಕುತ್ತಿಗೆ ನೋವು ಕಾಡುತ್ತಿದ್ದು, ಅವರು 3ನೇ ಕ್ರಮಾಂಕದಲ್ಲಿ ಆಡುವ ಕುರಿತು ಅನುಮಾನವಿದೆ. ಆಡುವ 11ರ ಬಳಗದಲ್ಲಿ ಗಿಲ್ ಬದಲಿಗೆ ಸರ್ಫರಾಝ್ ಖಾನ್ ಆಡಬಹುದು. ಕೆ.ಎಲ್.ರಾಹುಲ್ 3ನೇ ಕ್ರಮಾಂಕಕ್ಕೆ ಭಡ್ತಿ ಪಡೆಯಬಹುದು. ಭಾರತವು ಹೆಚ್ಚುವರಿ ಸ್ಪಿನ್ನರ್ ಇಲ್ಲವೇ ಮೂರನೇ ವೇಗಿಯನ್ನು ಕಣಕ್ಕಿಳಿಸುತ್ತದೆಯೋ ಎಂದು ನೋಡಬೇಕಾಗಿದೆ. ವಿರಾಟ್ ಕೊಹ್ಲಿ ಅವರು ಹಿಂದಿನ 8 ಟೆಸ್ಟ್ ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಅದಕ್ಕೂ ಮೊದಲು ಅವರು ರನ್ ಬರ ಎದುರಿಸಿದ್ದರು. ಐಪಿಎಲ್‌ನಲ್ಲಿ ಆರ್‌ಸಿಬಿಯ ತವರು ಮೈದಾನವಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ರನ್ ಗಳಿಸುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ನ್ಯೂಝಿಲ್ಯಾಂಡ್ ತಂಡದಲ್ಲಿ ವಿಲಿಯಮ್ಸನ್ ಬದಲಿಗೆ ಮಾರ್ಕ್ ಚಾಪ್‌ಮಾನ್ ತಂಡದಲ್ಲಿದ್ದಾರೆ. ಆದರೆ ವಿಲ್ ಯಂಗ್ 3ನೇ ಕ್ರಮಾಂಕದಲ್ಲಿ ಆಡಬಹುದು. ಮಿಚೆಲ್ ಸ್ಯಾಂಟ್ನರ್ ತನ್ನ ಸ್ಥಾನ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ.
►ಅಂಕಿ-ಅಂಶ
*ನ್ಯೂಝಿಲ್ಯಾಂಡ್ ತಂಡ ಈ ಹಿಂದೆ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದಾಗ ಅಜಾಝ್ ಪಟೇಲ್ ಟೆಸ್ಟ್ ಇತಿಹಾಸದಲ್ಲಿ ಇನಿಂಗ್ಸ್ ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಉರುಳಿಸಿದ ಮೂರನೇ ಬೌಲರ್ ಎನಿಸಿಕೊಂಡಿದ್ದರು.
* ವಿರಾಟ್ ಕೊಹ್ಲಿಗೆ 9,000 ಟೆಸ್ಟ್ ರನ್ ಗಳಿಸಿದ ಭಾರತದ 4ನೇ ಬ್ಯಾಟರ್ ಎನಿಸಿಕೊಳ್ಳಲು 53 ರನ್ ಅಗತ್ಯವಿದೆ.
* ಭಾರತ ಕ್ರಿಕೆಟ್ ತಂಡ ಈ ವರ್ಷ 97 ಸಿಕ್ಸರ್‌ಗಳನ್ನು ಸಿಡಿಸಿದೆ. 2022ರಲ್ಲಿ ಇಂಗ್ಲೆಂಡ್ ನಿರ್ಮಿಸಿದ್ದ ದಾಖಲೆ(89 ಸಿಕ್ಸರ್)ಯನ್ನು ಹಿಂದಿಕ್ಕಿದೆ.
►ತಂಡಗಳು
ಭಾರತ(ಸಂಭಾವ್ಯ): 1.ರೋಹಿತ್ ಶರ್ಮಾ(ನಾಯಕ), 2. ಯಶಸ್ವಿ ಜೈಸ್ವಾಲ್, 3. ಶುಭಮನ್ ಗಿಲ್/ಸರ್ಫರಾಝ್ ಖಾನ್, 4. ವಿರಾಟ್ ಕೊಹ್ಲಿ, 5. ರಿಷಭ್ ಪಂತ್(ವಿಕೆಟ್ ಕೀಪರ್), 6. ಕೆ.ಎಲ್.ರಾಹುಲ್, 7. ರವೀಂದ್ರ ಜಡೇಜ, 8. ಆರ್.ಅಶ್ವಿನ್, 9. ಆಕಾಶ್ ದೀಪ್/ಕುಲದೀಪ್ ಯಾದವ್, 10. ಜಸ್‌ಪ್ರಿತ್ ಬುಮ್ರಾ, 11. ಮುಹಮ್ಮದ್ ಸಿರಾಜ್.
ನ್ಯೂಝಿಲ್ಯಾಂಡ್(ಸಂಭಾವ್ಯ): 1. ಡೆವೊನ್ ಕಾನ್ವೆ, 2. ಟಾಮ್ ಲ್ಯಾಥಮ್(ನಾಯಕ), 3. ವಿಲ್ ಯಂಗ್, 4. ರಚಿನ್ ರವೀಂದ್ರ, 5. ಡೇರಿಲ್ ಮಿಚೆಲ್, 6. ಟಾಮ್ ಬ್ಲಂಡೆಲ್(ವಿಕೆಟ್ ಕೀಪರ್), 7. ಗ್ಲೆನ್ ಫಿಲಿಪ್ಸ್, 8. ಮಿಚೆಲ್ ಸ್ಯಾಂಟ್ನರ್/ಮೈಕಲ್ ಬ್ರೆಸ್‌ವೆಲ್, 9. ಟಿಮ್ ಸೌಥಿ, 10. ಅಜಾಝ್ ಪಟೇಲ್, 11. ವಿಲ್ ಒ ರೂರ್ಕ್.
ಪಂದ್ಯ ಆರಂಭದ ಸಮಯ: ಬೆಳಗ್ಗೆ 9:30