ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್ಗೂ ದಕ್ಷಿಣ ಆಫ್ರಿಕಾ ನಾಯಕ ಬವುಮಾ ಅಲಭ್ಯ
ಟೆಂಬಾ ಬವುಮಾ | PC : X \ @ProteasMenCSA
ಢಾಕಾ : ಗಾಯಗೊಂಡಿರುವ ನಾಯಕ ಟೆಂಬಾ ಬವುಮಾ ದಕ್ಷಿಣ ಆಫ್ರಿಕಾ ತಂಡಕ್ಕೆ ವಾಪಸಾಗುವುದು ಇನ್ನಷ್ಟು ವಿಳಂಬವಾಗಲಿದೆ. ಬವುಮಾ ಮುಂದಿನ ವಾರ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ನಿಂದಲೂ ಹೊರಗುಳಿಯಲಿದ್ದಾರೆ ಎಂದು ಕೋಚ್ ಶುಕ್ರಿ ಕೊನ್ರಾಡ್ ಶುಕ್ರವಾರ ಹೇಳಿದ್ದಾರೆ.
ಢಾಕಾದಲ್ಲಿ ಈ ವಾರ ಕೊನೆಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬವುಮಾ ಆಡಿರಲಿಲ್ಲ. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್ ಅಂತರದಿಂದ ಗೆದ್ದುಕೊಂಡಿತ್ತು.
ಈ ತಿಂಗಳು ಅಬುಧಾಬಿಯಲ್ಲಿ ಐರ್ಲ್ಯಾಂಡ್ ವಿರುದ್ಧ ನಡೆದ 2ನೇ ಏಕದಿನ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಬವುಮಾ ಗಾಯಗೊಂಡಿದ್ದರು.
ದಕ್ಷಿಣ ಆಫ್ರಿಕಾವು ನವೆಂಬರ್-ಡಿಸೆಂಬರ್ನಲ್ಲಿ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯ ಆತಿಥ್ಯ ವಹಿಸಲಿದೆ.
ಬವುಮಾ ಅನುಪಸ್ಥಿತಿಯು ಹಿನ್ನಡೆಯಾಗಿದೆ. ಅವರು ನಮ್ಮ ಶ್ರೇಷ್ಠ ಆಟಗಾರ. ಇಂತಹ ಹಿನ್ನಡೆಯನ್ನು ನಿಭಾಯಿಸಲು ನಾವು ಶಕ್ತರಾಗಿದ್ದೇವೆ ಎಂದು ಕೋಚ್ ಕೊನ್ರಾಡ್ ಹೇಳಿದ್ದಾರೆ.
ಬಾಂಗ್ಲಾದೇಶ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯವು ಮಂಗಳವಾರದಿಂದ ಆರಂಭವಾಗಲಿದೆ. ಬವುಮಾ ಬದಲಿಗೆ ಏಡೆನ್ ಮರ್ಕ್ರಮ್ ತಂಡದ ನಾಯಕತ್ವ ವಹಿಸಲಿದ್ದಾರೆ.