ನೆದರ್ಲೆಂಡ್ಸ್ ವಿರುದ್ಧ ಜಯ: ಸೂಪರ್ 8 ಹೊಸ್ತಿಲಲ್ಲಿ ಬಾಂಗ್ಲಾ
PC: x.com/toisports
ಹೊಸದಿಲ್ಲಿ: ಹಿರಿಯ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರು ಅರ್ಧಶತಕದೊಂದಿಗೆ ಉತ್ತಮ ಫಾರ್ಮ್ ಗೆ ಮರಳಿರುವ ಜತೆಗೆ ಲೆಗ್ ಸ್ಪಿನ್ನರ್ ರಿಷನ್ ಹುಸೇನ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ನೆದರ್ಲೆಂಡ್ಸ್ ತಂಡವನ್ನು 25 ರನ್ ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ತಂಡ ಸೂಪರ್ 8 ಹಂತದ ಹೊಸ್ತಿಲಿಗೆ ಬಂದಿದೆ.
ಗುರುವಾರ ಕಿಂಗ್ಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದರೆ, 160 ರನ್ ಗಳನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಬಾಂಗ್ಲಾದೇಶದ ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಅಧಿಕೃತವಾಗಿ ಟೂರ್ನಿಯಿಂದ ನಿರ್ಗಮಿಸಿದಂತಾಗಿದೆ. ಉತ್ತಮ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿದ ಶಕೀಬ್ 46 ಎಸೆತಗಳಲ್ಲಿ 64 ರನ್ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಜತೆಗೆ ತನ್ಝೀದ್ ಹಸನ್ (26 ಎಸೆತಗಳಲ್ಲಿ 35) ಮತ್ತು ಮೊಹ್ಮದುಲ್ಲಾ (21 ಎಸೆತಗಳಲ್ಲಿ 25) ಕೂಡಾ ತಂಡದ ಮೊತ್ತ ಹಿಗ್ಗಿಸಲು ಕಾರಣರಾದರು. ಸಾಮಾನ್ಯ ಮೊತ್ತವನ್ನು ಬೆನ್ನಟ್ಟುವಲ್ಲಿ ಡಚ್ ತಂಡ ಪವರ್ ಪ್ಲೇ ಮುಗಿಯುವ ವೇಳೆಗೆ 2 ವಿಕೆಟ್ ನಷ್ಟಕ್ಕೆ ಕೇವಲ 32 ರನ್ ಕಲೆಹಾಕಲು ಸಾಧ್ಯವಾಯಿತು.
ಇನ್ನೊಂದು ಪಂದ್ಯದಲ್ಲಿ ಒಮನ್ ತಂಡವನ್ನು ಕೇವಲ 47 ರನ್ಗಳಿಗೆ ಕೆಡವಿದ ಬಲಿಷ್ಠ ಇಂಗ್ಲೆಂಡ್ ತಂಡ ಕೇವಲ 3.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿ ದಾಖಲೆ ನಿರ್ಮಿಸಿತು. ಒಮನ್ ಪರ ಶೋಯಬ್ ಖಾನ್ ಮಾತ್ರ ಎರಡಂಕಿ (11) ರನ್ ಗಳಿಸಲು ಸಾಧ್ಯವಾಯಿತು.