ಬಾಂಗ್ಲಾ ಕ್ರಿಕೆಟಿಗ ನಾಸಿರ್ ಹೊಸೈನ್ಗೆ 2 ವರ್ಷ ನಿಷೇಧ
(TOI Photo)
ದುಬೈ: ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ಬಾಂಗ್ಲಾದೇಶದ ಆಲ್ರೌಂಡರ್ ನಾಸಿರ್ ಹೊಸೈನ್ ಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಮಂಗಳವಾರ ಎರಡು ವರ್ಷಗಳ ನಿಷೇಧ ವಿಧಿಸಿದೆ.
ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದ ಮೂರು ಆರೋಪಗಳನ್ನು ಅವರು ಒಪ್ಪಿಕೊಂಡ ಬಳಿಕ ಐಸಿಸಿಯು ಈ ಕ್ರಮ ತೆಗೆದುಕೊಂಡಿದೆ. ಎರಡು ವರ್ಷಗಳ ನಿಷೇಧದ ಪೈಕಿ ಆರು ತಿಂಗಳ ನಿಷೇಧವನ್ನು ಅದು ಅಮಾನತಿನಲ್ಲಿರಿಸಿದೆ.
2020-21ರ ಅಬುಧಾಬಿ ಟಿ10 ಆವೃತ್ತಿಯಲ್ಲಿ ಆಡುತ್ತಿರುವಾಗ ಸುಮಾರು 62,000 ರೂ. ಬೆಲೆಯ ಹೊಸ ಐಫೋನ್ 12 ಸ್ವೀಕರಿಸಿರುವ ಬಗ್ಗೆ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಅದಕ್ಕಾಗಿ ತನ್ನನ್ನು ಯಾವ ರೀತಿಯಲ್ಲಿ ಸಂಪರ್ಕಿಸಲಾಯಿತು ಮತ್ತು ಯಾವ ರೀತಿ ಭ್ರಷ್ಟಾಚಾರದಲ್ಲಿ ತೊಡಗುವಂತೆ ಪ್ರೇರೇಪಿಸಲಾಯಿತು ಎಂಬ ಬಗ್ಗೆ ಸಂಪೂರ್ಣ ವಿವರಗಳನ್ನು ಅವರು ನೀಡಿಲ್ಲ ಎಂದು ಆರೋಪಿಸಲಾಗಿದೆ.
ಅವರು ಆ ಪಂದ್ಯಾವಳಿಯಲ್ಲಿ ಪುಣೆ ಡೆವಿಲ್ಸ್ ಪರವಾಗಿ ಆಡುತ್ತಿದ್ದರು. ಆ ತಂಡದ 8 ಮಂದಿಯ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಲಾಗಿದೆ.