ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಬಂಗಾಳ ತಂಡವನ್ನು ಮಣಿಸಿದ ಬರೋಡ ಸೆಮಿ ಫೈನಲ್ಗೆ
ನೀರಸ ಪ್ರದರ್ಶನ ನೀಡಿದ ಮುಹಮ್ಮದ್ ಶಮಿ
ಮುಹಮ್ಮದ್ ಶಮಿ| PTI
ಹೊಸದಿಲ್ಲಿ : ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಳ ಕ್ರಿಕೆಟ್ ತಂಡವು ಬರೋಡಾ ತಂಡದ ವಿರುದ್ಧ 41 ರನ್ ಅಂತರದಿಂದ ಸೋಲನುಭವಿಸಿದ್ದು, ಬಂಗಾಳದ ಪರ ವೇಗದ ಬೌಲರ್ ಮುಹಮ್ಮದ್ ಶಮಿ ನಿರೀಕ್ಷಿತ ಪ್ರದರ್ಶನ ನೀಡದೆ ನಿರಾಶೆಗೊಳಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬರೋಡಾ ತಂಡವು 7 ವಿಕೆಟ್ಗಳ ನಷ್ಟಕ್ಕೆ 172 ರನ್ ಗಳಿಸಿದ್ದು, ಆರಂಭಿಕ ಬ್ಯಾಟರ್ ಶಾಶ್ವತ್ ರಾವತ್ 26 ಎಸೆತಗಳಲ್ಲಿ 40 ರನ್(1 ಬೌಂಡರಿ,3 ಸಿಕ್ಸರ್)ಗಳಿಸಿದರು. ಅಭಿಮನ್ಯು ಸಿಂಗ್ 37 ರನ್ ಹಾಗೂ ಶಿವಾಲಿಕ್ ಶರ್ಮಾ 24 ರನ್ ಕೊಡುಗೆ ನೀಡಿದರು.
ಬಂಗಾಳದ ಪರ ಪ್ರದೀಪ್ತ ಪ್ರಾಮಾಣಿಕ್(2-6), ಕನಿಷ್ಕ್ ಸೇಥ್(2-39) ಹಾಗೂ ಮುಹಮ್ಮದ್ ಶಮಿ(2-43)ತಲಾ ಎರಡು ವಿಕೆಟ್ಗಳನ್ನು ಪಡೆದಿದ್ದಾರೆ.
ಗೆಲ್ಲಲು 173 ರನ್ ಗುರಿ ಪಡೆದ ಬಂಗಾಳ ತಂಡವು ಆಲ್ರೌಂಡರ್ ಶಹಬಾಝ್ ಅಹ್ಮದ್ ಅವರ ಅಮೋಘ ಪ್ರದರ್ಶನದ(55 ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಹೊರತಾಗಿಯೂ 18 ಓವರ್ಗಳಲ್ಲಿ ಕೇವಲ 131 ರನ್ ಗಳಿಸಿ ಆಲೌಟಾಯಿತು.
ಹಾರ್ದಿಕ್ ಪಾಂಡ್ಯ(3-27), ಲುಕ್ಮಾನ್ ಮೇರಿವಾಲಾ(3-17) ಹಾಗೂ ಅತಿತ್ ಶೇಥ್(3-41)ನೇತೃತ್ವದ ಬರೋಡಾ ಬೌಲಿಂಗ್ ದಾಳಿಗೆ ಬಂಗಾಳದ ಬ್ಯಾಟಿಂಗ್ ಸರದಿಯು ತತ್ತರಿಸಿತು.
ಎಲ್ಲರ ಕಣ್ಣು ಶಮಿ ಅವರ ಪ್ರದರ್ಶನದ ಮೇಲೆ ನೆಟ್ಟಿತ್ತು. ಅನುಭವಿ ವೇಗದ ಬೌಲರ್ ಶಮಿ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲು ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲು ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳುವ ನಿಟ್ಟಿನಲ್ಲಿ ಶ್ರಮಪಡುತ್ತಿದ್ದಾರೆ.
ಈ ಪಂದ್ಯಕ್ಕಿಂತ ಮೊದಲು ಶಮಿ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 7.8 ಇಕಾನಮಿ ರೇಟ್ನಲ್ಲಿ 11 ವಿಕೆಟ್ಗಳನ್ನು ಪಡೆದಿದ್ದಾರೆ.
ಇಂದು ತನ್ನ ಮೊದಲ ಓವರ್ನಲ್ಲಿ ಎರಡು ವೈಡ್ಗಳನ್ನು ಎಸೆದಿದ್ದ ಶಮಿ ಅವರು ತನ್ನ ಸ್ಪೆಲ್ನುದ್ದಕ್ಕೂ ಹಿಡಿತವನ್ನು ಉಳಿಸಿಕೊಳ್ಳಲು ಪರದಾಟ ನಡೆಸಿದರು. 34ರ ಹರೆಯದ ಬೌಲರ್ ಶಮಿ ಅವರು ಎರಡು ಸ್ಪೆಲ್ಗಳಲ್ಲಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದು, ಕೆಲವು ಯಾರ್ಕರ್ಗಳನ್ನು ಎಸೆದಿದ್ದರು. ಆದರೆ ತನ್ನ ಎಂದಿನ ನಿಖರತೆ ಸಾಧಿಸುವಲ್ಲಿ ವಿಫಲರಾದರು.
ಶಿವಾಲಿಕ್ ಶರ್ಮಾ(24 ರನ್, 17 ಎಸೆತ)ಅವರು ಶಮಿ ಬೌಲಿಂಗ್ನಲ್ಲಿ ಸತತ ಸಿಕ್ಸರ್ಗಳನ್ನು ಸಿಡಿಸಿದರು.
ಶಮಿ ಅವರು ಬರೋಡಾದ ಶಿವಾಲಿಕ್ ಹಾಗೂ ಅತಿತ್ ವಿಕೆಟನ್ನು ಪಡೆದರೂ ಪಂದ್ಯವು ಬಂಗಾಳದ ಕೈಮೀರಿ ಹೋಗಿತ್ತು. ಬ್ಯಾಟಿಂಗ್ನಲ್ಲಿ ಮಿಂಚಲು ವಿಫಲರಾದ ಶಮಿ ಭಾರತದ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಮೇರಿವಾಲಾ ಅವರು 4ನೇ ಓವರ್ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿ ಬಂಗಾಳದ ರನ್ ಚೇಸ್ಗೆ ದೊಡ್ಡ ಹೊಡೆತ ನೀಡಿದರು. ಮೇರಿವಾಲಾ ಅವರು ಫಾರ್ಮ್ನಲ್ಲಿರುವ ಕರಣ್ ಲಾಲ್(6 ರನ್), ನಾಯಕ ಸುದೀಪ್ ಕುಮಾರ್ ಘರಾಮಿ(2 ರನ್) ಹಾಗೂ ರಿತಿಕ್ ಚಟರ್ಜಿ(0) ವಿಕೆಟ್ಗಳನ್ನು ಉರುಳಿಸಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಶಹಬಾಝ್ ಅವರು ಇನಿಂಗ್ಸ್ ಅಂತ್ಯದಲ್ಲಿ ಪ್ರತಿರೋಧ ಒಡ್ಡಿದರೂ ಅವರಿಗೆ ಇತರ ಆಟಗಾರರಿಂದ ಸಾಕಷ್ಟು ನೆರವು ಸಿಗಲಿಲ್ಲ. ಬಂಗಾಳದ ಬ್ಯಾಟಿಂಗ್ನಲ್ಲಿ ರಿತ್ವಿಕ್ ರಾಯ್(29 ರನ್), ಅಭಿಷೇಕ್ ಪೊರೆಲ್(22ರನ್)ಎರಡಂಕೆಯ ಸ್ಕೋರ್ ಗಳಿಸಿದರು.
*ಮಧ್ಯಪ್ರದೇಶ ತಂಡ ಸೆಮಿ ಫೈನಲ್ಗೆ
ಆಲೂರ್ನಲ್ಲಿ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಅವರ ಆಲ್ರೌಂಡ್ ಪ್ರದರ್ಶನದ ಬಲದಿಂದ ಮಧ್ಯಪ್ರದೇಶ ತಂಡವು ಸೌರಾಷ್ಟ್ರ ಕ್ರಿಕೆಟ್ ತಂಡವನ್ನು 6 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಸೆಮಿ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
23 ರನ್ಗೆ ಎರಡು ವಿಕೆಟ್ಗಳನ್ನು ಉರುಳಿಸಿದ ವೆಂಕಟೇಶ್ ಅಯ್ಯರ್ ಅವರು 33 ಎಸೆತಗಳಲ್ಲಿ ಔಟಾಗದೆ 38 ರನ್ ಗಳಿಸಿದರು. ಇದರೊಂದಿಗೆ ಮಧ್ಯಪ್ರದೇಶ ತಂಡವು ಸೌರಾಷ್ಟ್ರ ತಂಡ ನೀಡಿದ್ದ 174 ರನ್ ಗುರಿಯನ್ನು ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ಗಳನ್ನು ಕಳೆದುಕೊಂಡು ಯಶಸ್ವಿಯಾಗಿ ಚೇಸ್ ಮಾಡಿತು.
ಅರ್ಪಿತ್ ಗೌಡ್ 42 ರನ್, ವೆಂಕಟೇಶ್ ಔಟಾಗದೆ 38 ಹಾಗೂ ರಜತ್ ಪಾಟಿದಾರ್ 28 ರನ್ ಕೊಡುಗೆ ನೀಡಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ ತಂಡವು ಚಿರಾಗ್ ಜಾನಿ(ಔಟಾಗದೆ 80)ಸಿಡಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 173 ರನ್ ಗಳಿಸಿತು.
ಸಂಕ್ಷಿಪ್ತ ಸ್ಕೋರ್
ಬರೋಡಾ: 20 ಓವರ್ಗಳಲ್ಲಿ 171/7
(ಶಾಶ್ವತ್ ರಾವತ್ 40, ಅಭಿಮನ್ಯು ರಾಜ್ಪೂತ್ 37, ಶಿವಾಲಿಕ್ ಶರ್ಮಾ 24, ಮುಹಮ್ಮದ್ ಶಮಿ 2-43, ಪ್ರದೀಪ್ತ ಪ್ರಾಮಾಣಿಕ್ 2-6)
ಬಂಗಾಳ: 18 ಓವರ್ಗಳಲ್ಲಿ 131 ರನ್ಗೆ ಆಲೌಟ್
(ಶಹಬಾಝ್ ಅಹ್ಮದ್ 55, ಋತ್ವಿಕ್ ರಾಯ್ 29, ಲುಕ್ಮಾನ್ ಮೇರಿವಾಲಾ 3-17, ಹಾರ್ದಿಕ್ ಪಾಂಡ್ಯ 3-27, ಅ್ 3-41)
ಸೌರಾಷ್ಟ್ರ: 20 ಓವರ್ಗಳಲ್ಲಿ 173/7
(ಚಿರಾಗ್ ಜಾನಿ ಔಟಾಗದೆ 80, ವೆಂಕಟೇಶ್ ಅಯ್ಯರ್ 2-23)
ಮಧ್ಯಪ್ರದೇಶ:19.4 ಓವರ್ಗಳಲ್ಲಿ 174/4
(ಅರ್ಪಿತ್ ಗೌಡ್ 42, ವೆಂಕಟೇಶ್ ಅಯ್ಯರ್ ಔಟಾಗದೆ 38, ರಜತ್ ಪಾಟಿದಾರ್ 28)