ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್: 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ
Photo:X/BCCI
ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 4ನೇ ದಿನದಾಟದ ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದ ಭಾರತ ತಂಡವು, ನಂತರ ರವೀಂದ್ರ ಜಡೇಜಾ ಹಾಗೂ ಸರ್ಫರಾಜ್ ಖಾನ್ ಅವರ ಅವರ ವಿಕೆಟ್ ಅನ್ನು ತ್ವರಿತವಾಗಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತ ತಂಡವು ಐದು ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದ್ದು, ಗೆಲುವಿಗೆ 53 ರನ್ ಅಗತ್ಯವಿದೆ.
ಇದಕ್ಕೂ ಮುನ್ನ, ಇಂದು ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವು, ನಾಯಕ ರೋಹಿತ್ ಶರ್ಮ (55) ಹಾಗೂ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (37) ನಡುವಿನ ಉತ್ತಮ ಜೊತೆಯಾಟದಿಂದ ಸುಲಭ ಗೆಲುವಿನೆಡೆಗೆ ಧಾವಿಸುತ್ತಿತ್ತು. ಇವರಿಬ್ಬರೂ ಆರಂಭಿಕ ಜೊತೆಯಾಟದಲ್ಲಿ 84 ರನ್ ಪೇರಿಸಿದರು.
ಆದರೆ, ಭೋಜನ ವಿರಾಮಕ್ಕೂ ಮುನ್ನ ಕ್ರಮವಾಗಿ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮ ಹಾಗೂ ರಜತ್ ಪಾಟೀದಾರ್ ಒಬ್ಬರ ಹಿಂದೆ ಒಬ್ಬರು ಕ್ಷಿಪ್ರವಾಗಿ ನಿರ್ಗಮಿಸಿದ್ದರಿಂದ ಭಾರತ ತಂಡವು ಸಂಕಷ್ಟಕ್ಕೆ ಸಿಲುಕಿತು. ಭೋಜನಾ ವಿರಾಮದ ನಂತರ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವು, ರವೀಂದ್ರ ಜಡೇಜಾ (4) ಹಾಗೂ ಸರ್ಫರಾಜ್ ಖಾನ್ (0) ವಿಕೆಟ್ ಅನ್ನು ತ್ವರಿತವಾಗಿ ಕಳೆದುಕೊಂಡು ಮತ್ತಷ್ಟು ಒತ್ತಡಕ್ಕೆ ಸಿಲುಕಿದೆ.
ಸದ್ಯ ಕ್ರೀಸಿನಲ್ಲಿರುವ ಶುಭಮನ್ ಗಿಲ್ (25) ಹಾಗೂ ಧ್ರುವ್ ಜುರೇಲ್ (13) ಭಾರತ ತಂಡವನ್ನು ಅಪಾಯದಿಂದ ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಭಾರತವೇನಾದರೂ ಈ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಸರಣಿಯು 3-1ರ ಅಂತರದಲ್ಲಿ ಭಾರತ ತಂಡದ ಕೈವಶವಾಗಲಿದೆ. ಒಂದು ವೇಳೆ ಇಂಗ್ಲೆಂಡ್ ಜಯಿಸಿದರೆ 2-2ರಲ್ಲಿ ಸರಣಿ ಸಮಬಲವಾಗಲಿದೆ.