ಟಿ20 ವಿಶ್ವಕಪ್ ತನಕ ರಾಹುಲ್ ದ್ರಾವಿಡ್ ಭಾರತದ ಕೋಚ್ ಆಗಿ ಮುಂದುವರಿಯಲಿದ್ದಾರೆ: ಜಯ್ ಶಾ
ರಾಹುಲ್ ದ್ರಾವಿಡ್ - Photo- PTI
ಹೊಸದಿಲ್ಲಿ: ಮುಂಬರುವ 2024ರ ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ತನಕ ರಾಹುಲ್ ದ್ರಾವಿಡ್ ಭಾರತದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ.
ದ್ರಾವಿಡ್ ರೊಂದಿಗೆ ಚರ್ಚೆ ನಡೆಸಿದ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಘೋಷಣೆ ಮಾಡಿದರು.
ದ್ರಾವಿಡ್ ಅವರ ಗುತ್ತಿಗೆ ಅವಧಿಯು ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ ನಂತರ ಅಂತ್ಯವಾಗಿತ್ತು. ಡಿಸೆಂಬರ್-ಜನವರಿಯಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಮ್ಮ ಸಹಾಯಕ ಸಿಬ್ಬಂದಿಯೊಂದಿಗೆ ಕರ್ತವ್ಯವನ್ನು ಮುಂದುವರಿಸುವಂತೆ ದ್ರಾವಿಡ್ಗೆ ತಿಳಿಸಲಾಗಿತ್ತು. ಆದರೆ ಅವರು ಕೋಚ್ ಅವಧಿಯನ್ನು ಅಂತಿಮಗೊಳಿಸಲಾಗಿರಲಿಲ್ಲ.
2023ರ ವಿಶ್ವಕಪ್ ಮುಗಿದ ತಕ್ಷಣ ರಾಹುಲ್ ಭಾಯ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದರು. ಹೀಗಾಗಿ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಕೊನೆಗೂ ಇಂದು ಭೇಟಿ ಸಾಧ್ಯವಾಯಿತು. ರಾಹುಲ್ ದ್ರಾವಿಡ್ರಂತಹ ಹಿರಿಯ ವ್ಯಕ್ತಿಯ ಗುತ್ತಿಗೆಗೆ ಸಂಬಂಧಿಸಿ ನೀವೇಕೆ ಚಿಂತಿತರಾಗಿದ್ದೀರಿ? ರಾಹುಲ್ ಟಿ-20 ವಿಶ್ವಕಪ್ ತನಕವೂ ಕೋಚ್ ಆಗಿ ಉಳಿಯಲಿದ್ದಾರೆ ಎಂದು ಜಯ್ ಶಾ ಹೇಳಿದ್ದಾರೆ.