ವಿಶ್ವ ಕ್ರಿಕೆಟ್ ನಲ್ಲಿ ಅಫ್ಘಾನಿಸ್ತಾನದ ಯಶಸ್ಸಿನ ಹಿಂದಿದೆ ಬಿಸಿಸಿಐ!
PC :́ PTI
ಹೊಸದಿಲ್ಲಿ : ವಿಶ್ವ ಕ್ರಿಕೆಟ್ ನಲ್ಲಿ ಅಫ್ಘಾನಿಸ್ತಾನ ತಂಡದ ಯಶೋಗಾಥೆಯು ಎಲ್ಲರಿಗೂ ಅಚ್ಚರಿ ಉಂಟು ಮಾಡುತ್ತಿದೆ. 2017ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನ ಪೂರ್ಣ ಸದಸ್ಯತ್ವ ಪಡೆದಿದ್ದ ಅಫ್ಘಾನಿಸ್ತಾನ ತಂಡ 2024ರಲ್ಲಿ ವಿಶ್ವಕಪ್(ಟಿ20)ವೊಂದರಲ್ಲಿ ಮೊದಲ ಬಾರಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಪ್ರಮುಖ ಟೂರ್ನಿಗಳಲ್ಲಿ ದುರ್ಬಲ ತಂಡವೆಂಬ ಹಣೆಪಟ್ಟಿ ಹೊಂದಿದ್ದ ಅಫ್ಘಾನಿಸ್ತಾನ ತಂಡ ಪ್ರಸಕ್ತ ಟಿ20 ವಿಶ್ವಕಪ್ ನಲ್ಲಿ ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯದಂತಹ ಬಲಿಷ್ಠ ತಂಡಕ್ಕೆ ಮಣ್ಣುಮುಕ್ಕಿಸಿ ಎಲ್ಲರ ಕಣ್ಣು ತೆರೆಸಿದೆ. ಸೆಮಿ ಫೈನಲ್ ಗೆ ಪ್ರವೇಶಿಸಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಈ ಮಟ್ಟಕ್ಕೆ ಶಕ್ತಿಯುತವಾಗಲು ಭಾರತ ಹಾಗೂ ಬಿಸಿಸಿಐ ಮಹತ್ವದ ಪಾತ್ರವಹಿಸಿವೆ.
ಭಾರತದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ತವರು ಮೈದಾನ : ಗ್ರೇಟರ್ ನೋಯ್ಡಾದ ಶಾಹೀದ್ ವಿಜಯ್ ಸಿಂಗ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ 2015ರಲ್ಲಿ ಮೊದಲ ಬಾರಿ ಅಫ್ಘಾನಿಸ್ತಾನದ ತಾತ್ಕಾಲಿಕ ತವರು ಮೈದಾನವಾಗಿತ್ತು. ಇದಕ್ಕೆ ಬಿಸಿಸಿಐ ಬೆಂಬಲ ನೀಡಿತ್ತು. ಆ ನಂತರ ಅಫ್ಘಾನಿಸ್ತಾನವು ತನ್ನ ನೆಲೆಯನ್ನು ನೊಯ್ಡಾದಿಂದ ಶಾರ್ಜಾಕ್ಕೆ ಸ್ಥಳಾಂತರಿಸಿತು. ಅಫ್ಘಾನಿಸ್ತಾನ ಕ್ರಿಕೆಟ್ ತಂಡ 2017ರಲ್ಲಿ ಐರ್ಲ್ಯಾಂಡ್ ವಿರುದ್ಧ ಅಂತರರಾಷ್ಟ್ರೀಯ ಪಂದ್ಯಗಳನ್ನು ನೊಯ್ಡಾದಲ್ಲಿ ಆಡಿತ್ತು.
ಅಫ್ಘಾನಿಸ್ತಾನ ತಂಡ ನೊಯ್ಡಾ ಮಾತ್ರವಲ್ಲ ಡೆಹ್ರಾಡೂನ್ ನಲ್ಲೂ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗಳನ್ನು ಆಯೋಜಿಸಿತ್ತು.
ಭಾರತ ಕೋಚ್ ಗಳ ಮಾರ್ಗದರ್ಶನ : ಭಾರತದ ಮಾಜಿ ಆಟಗಾರರಾದ ಲಾಲ್ ಚಂದ್ ರಜಪೂತ್, ಮನೋಜ್ ಪ್ರಭಾಕರ್ ಹಾಗೂ ಅಜಯ್ ಜಡೇಜ ಈ ಹಿಂದೆ ಅಫ್ಘಾನಿಸ್ತಾನ ತಂಡಕ್ಕೆ ಕೋಚ್ ನೀಡಿದ್ದರು. 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನ್ ತಂಡಕ್ಕೆ ಜಡೇಜ ಸಲಹೆಗಾರರಾಗಿದ್ದರು.
ಐಪಿಎಲ್ ಮಹತ್ವದ ಪಾತ್ರ: ಅಫ್ಘಾನಿಸ್ತಾನ ಆಟಗಾರರು ಕ್ರಿಕೆಟ್ ನಲ್ಲಿ ಯಶಸ್ಸು ಸಾಧಿಸಲು ಐಪಿಎಲ್ ಟೂರ್ನಿಯು ದೊಡ್ಡ ಕೊಡುಗೆ ನೀಡಿದೆ. ಐಪಿಎಲ್ ಟಿ20 ಲೀಗ್ ನಲ್ಲಿ ಹಲವು ಅಫ್ಘಾನ್ ಆಟಗಾರರು ಭಾಗವಹಿಸಿ ಸಾಕಷ್ಟು ಸಂಭಾವನೆ ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಐಪಿಎಲ್ ನಲ್ಲಿ ಅಫ್ಘಾನ್ ಆಟಗಾರರ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ರಶೀದ್ ಖಾನ್ ಹಾಗೂ ನವೀನ್ ಉಲ್ ಹಕ್ ಐಪಿಎಲ್ ನಲ್ಲಿ ಮಿಂಚಿರುವ ಪ್ರಮುಖ ಆಟಗಾರರಾಗಿದ್ದಾರೆ.