ಭಾರತಕ್ಕೆ ಇನ್ನಷ್ಟು ಕಾಲ ರಾಹುಲ್ ದ್ರಾವಿಡ್ ಕೋಚ್?
ಅವಧಿ ವಿಸ್ತರಣೆಗೆ ಬಿಸಿಸಿಐ ಒಲವು
ರಾಹುಲ್ ದ್ರಾವಿಡ್ Photo- PTI
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಹುಲ್ ದ್ರಾವಿಡ್ ಅವರ ಗುತ್ತಿಗೆಯನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆಯಾದರೂ, ಸದ್ಯದ ಮಟ್ಟಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅವರನ್ನೇ ಮುಖ್ಯ ತರಬೇತುದಾರರನ್ನಾಗಿ ಮುಂದುವರಿಸಲು ಅದು ನಿರ್ಧರಿಸಿದ್ದು, ಅದಕ್ಕಾಗಿ ರೂಪುರೇಷೆಗಳನ್ನು ಸಿದ್ಧಪಡಿಸಿದೆ ಎಂದು indiatoday.in ವರದಿ ಮಾಡಿದೆ.
ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಏಕದಿನ ವಿಶ್ವಕಪ್ ಕ್ರೀಡಾಕೂಟಗಳೆರಡಲ್ಲೂ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದ್ದು, ಕಳೆದ ಎರಡು ವರ್ಷಗಳಲ್ಲಿ ಉತ್ತಮ ದಾಖಲೆಯನ್ನೂ ಹೊಂದಿದೆ. ಹೀಗಾಗಿ ಬಿಸಿಸಿಐನಲ್ಲಿರುವ ಹಲವಾರು ಮಂದಿ ಅವರನ್ನೇ ಮುಖ್ಯ ತರಬೇತುದಾರರನ್ನಾಗಿ ಮುಂದುವರಿಸಿದರೆ ಹಿರಿಯರ ತಂಡವು ನಿರಂತರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಲಾಗಿದೆ.
“ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ವಾರ ರಾಹುಲ್ ದ್ರಾವಿಡ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಖಂಡಿತವಾಗಿ, ಹೊಸ ಗುತ್ತಿಗೆಯ ಬಗ್ಗೆ ಇನ್ನಷ್ಟೆ ರೂಪುರೇಷೆ ಸಿದ್ಧವಾಗಬೇಕಿದೆ. ಆದರೆ, ಭಾರತೀಯ ಟೆಸ್ಟ್ ತಂಡದೊಂದಿಗೆ ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾಗೆ ತೆರಳಬೇಕು ಎಂದು ಬಿಸಿಸಿಐ ಬಯಸುತ್ತಿದೆ” ಎಂದು ಹೆಸರೇಳಲಿಚ್ಛಿಸದ ಬಿಸಿಸಿಐ ಪದಾಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹಾಗಾದರೆ, ಗುತ್ತಿಗೆ ಕರಾರಿಗೆ ಸಹಿ ಮಾಡದೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲು ರಾಹುಲ್ ದ್ರಾವಿಡ್ ಸಿದ್ಧರಿದ್ದಾರೆಯೆ? “ಗುತ್ತಿಗೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಆದರೆ, ಟೆಸ್ಟ್ ಸರಣಿಯು ಮುಖ್ಯವಾಗಿರುವುದರಿಂದ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ-20 ಸರಣಿಗೆ ಹೋಗದಿದ್ದರೂ, ನಂತರ ನಡೆಯಲಿರುವ ಏಕದಿನ ಪಂದ್ಯಗಳ ಸರಣಿಗೆ ಅವರು ಸೇರಿಕೊಳ್ಳಬಹುದಾಗಿದೆ” ಎಂದು ಬಿಸಿಸಿಐ ಮೂಲಗಳು ಹೇಳಿವೆ.