ಏಶ್ಯಕಪ್ಗಾಗಿ ಲಾಹೋರ್ಗೆ ಪ್ರಯಾಣಿಸಲಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ರಾಜೀವ್ ಶುಕ್ಲಾ
ಹೊಸದಿಲ್ಲಿ, ಆ.26: ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ಆಹ್ವಾನದ ಮೇರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ಏಶ್ಯಕಪ್ಗಾಗಿ ಲಾಹೋರ್ಗೆ ಪ್ರಯಾಣಿಸಲಿದ್ದಾರೆ.
ಎರಡೂ ದೇಶಗಳ ನಡುವೆ ರಾಜಕೀಯ ಉದ್ವಿಗ್ನತೆ ಉಂಟಾಗಿ ಭಾರತ-ಪಾಕ್ ಕ್ರಿಕೆಟ್ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿ ಸ್ಥಗಿತವಾದ ನಂತರ ಬಿಸಿಸಿಐ ಅಧಿಕಾರಿಗಳು ಇದೇ ಮೊದಲ ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ.
ಸೆಪ್ಟಂಬರ್ 3ರಂದು ಲಾಹೋರ್ನ ಗಡಾಫಿ ಸ್ಟೇಡಿಯಮ್ನಲ್ಲಿ ನಡೆಯಲಿರುವ ಶ್ರೀಲಂಕಾ-ಅಫ್ಘಾನಿಸ್ತಾನ ನಡುವಿನ ಗ್ರೂಪ್ ಪಂದ್ಯವನ್ನು ಇಬ್ಬರೂ ಪದಾಧಿಕಾರಿಗಳು ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೆಲವು ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಬಿಸಿಸಿಐಗೆ ಪಿಸಿಬಿ ಆಹ್ವಾನ ನೀಡಿತ್ತು. ಎಸಿಸಿಯ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ಬಿನ್ನಿ ಹಾಗೂ ಶುಕ್ಲಾ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ಖಚಿತಪಡಿಸಿದ್ದಾರೆ.
ಭಾರತವು ತನ್ನ ನೆರೆಯ ದೇಶಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಪಂದ್ಯಾವಳಿಯನ್ನು ಆಡಲಾಗುತ್ತಿದೆ. ಪಿಸಿಬಿ ಸಾಕಷ್ಟು ಒತ್ತಾಯ ಮಾಡಿದ ಹೊರತಾಗಿಯೂ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಮುಖ್ಯಸ್ಥರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಹಿರಂಗಪಡಿಸಿದ್ದರು. ಹಲವಾರು ಸುತ್ತಿನ ಮಾತುಕತೆಗಳ ನಂತರ ಈವೆಂಟನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಯಿತು.
ಆಗಸ್ಟ್ 30ರಂದು ಪಾಕಿಸ್ತಾನ ತಂಡ ನೇಪಾಳವನ್ನು ಎದುರಿಸುವುದರೊಂದಿಗೆ ಮುಲ್ತಾನ್ನಲ್ಲಿ ಟೂರ್ನಮೆಂಟ್ ಆರಂಭವಾಗಲಿದೆ. ಪಾಕಿಸ್ತಾನದಲ್ಲಿ ಒಟ್ಟು 4 ಪಂದ್ಯಗಳು ನಡೆಯಲಿದ್ದು. ಲಾಹೋರ್ 3 ಪಂದ್ಯಗಳ ಆತಿಥ್ಯವನ್ನು ವಹಿಸಲಿದೆ.