IPL 2025 | ಆರ್ಸಿಬಿ ನಾಯಕ ರಜತ್ ಪಾಟಿದಾರ್ ಗೆ ಬಿಸಿಸಿಐನಿಂದ ಭಾರೀ ದಂಡ

ರಜತ್ ಪಾಟಿದಾರ್ (Photo: X/@IPL)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಸೋಮವಾರ ನಡೆದ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಭಾರಿ ದಂಡ ವಿಧಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ನಿನ್ನೆಯ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್ ಗಳಿಂದ ಪರಾಭಗೊಳಿಸಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಸಂಭ್ರಮ ಮುಗಿಯುವ ಮುನ್ನವೇ, ನಿಧಾನ ಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಭಾರಿ ದಂಡ ತೆರಬೇಕಾಗಿದೆ.
ಈ ಕುರಿತು ಬಿಡುಗಡೆಯಾಗಿರುವ ಐಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ, “2025ರ ಐಪಿಎಲ್ ಋತುವಿನಲ್ಲಿ ರಜತ್ ಪಾಟಿದಾರ್ ತಂಡ ಮಾಡಿರುವ ಮೊದಲ ತಪ್ಪು ಇದಾಗಿದ್ದು, ಐಪಿಎಲ್ ಮಾದರಿ ನೀತಿ ಸಂಹಿತೆಯ ವಿಧಿ 2.2 ಅಡಿ ಕನಿಷ್ಠ ಓವರ್ ದರವನ್ನು ನಿರ್ವಹಣೆ ಮಾಡದ ತಪ್ಪಿಗಾಗಿ ಅವರಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ” ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವಿರಾಟ್ ಕೊಹ್ಲಿ (67), ನಾಯಕ ರಜತ್ ಪಾಟಿದಾರ್ (64) ಹಾಗೂ ಜಿತೇಶ್ ಶರ್ಮ(40)ರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಮುಂಬೈ ಇಂಡಿಯನ್ಸ್ ತಂಡಕ್ಕೆ 222 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿತು. ಈ ಸವಾಲಿನ ಮೊತ್ತವನ್ನು ವೀರೋಚಿತವಾಗಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು, ಕೊನೆಯ ಓವರ್ ನಲ್ಲಿ 19 ರನ್ ಗಳನ್ನು ಗಳಿಸಬೇಕಿತ್ತು. ಆದರೆ, ಈ ಕೊನೆಯ ಓವರ್ ಅನ್ನು ಬೌಲ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರ ಸಹೋದರ ಕೃನಾಲ್ ಪಾಂಡ್ಯ, ತಮ್ಮ ನಿಗದಿತ ಓವರ್ ನಲ್ಲಿ ಕೇವಲ ಆರು ರನ್ ಮಾತ್ರ ನೀಡಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂರನೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಮೂರನೆಯ ಗೆಲುವೂ ಕೂಡಾ ತವರಿನಿಂದ ಹೊರಗೇ ಬಂದಿದ್ದು ವಿಶೇಷ. ಈ ಬಾರಿಯ ಐಪಿಎಲ್ ಋತುವಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದಿದ್ದ ಪ್ರಥಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಪರಾಭವಗೊಂಡಿತ್ತು.