ಏಶ್ಯಕಪ್‌ಗೆ ಮೊದಲು ವಿರಾಟ್ ಕೊಹ್ಲಿ ಸಹಿತ ಇತರ ಸ್ಟಾರ್ ಆಟಗಾರರಿಗೆ ಎಚ್ಚರಿಕೆ ನೀಡಿದ ಬಿಸಿಸಿಐ : ಕಾರಣವೇನು ಗೊತ್ತೇ?
ಹೊಸದಿಲ್ಲಿ, ಆ.25: ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ತನ್ನ ಆಟಗಾರರಿಗೆ ತಮ್ಮ ಫಿಟ್‌ನೆಸ್ ಸ್ಕೋರ್‌ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್ ಸ್ಕೋರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಸ್ವಲ್ಪ ಸಮಯದ ನಂತರ ಈ ನಿರ್ದೇಶನ ಬಂದಿದೆ. ಈ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ)ತಿಳಿಸಲಾಗಿದೆ. ಬಿಸಿಸಿಐ ಅಂತಹ ಮಾಹಿತಿಯನ್ನು ಗೌಪ್ಯ ಎಂದು ಪರಿಗಣಿಸುತ್ತದೆ.
ಮೂಲಗಳ ಪ್ರಕಾರ ಏಶ್ಯಕಪ್‌ಗೆ ಮುಂಚಿತವಾಗಿ ಬೆಂಗಳೂರಿನ ಆಲೂರಿನಲ್ಲಿ ಗುರುವಾರ ಆರಂಭವಾದ ಪೂರ್ವ ಸಿದ್ದತಾ ಶಿಬಿರದಲ್ಲಿ ಭಾಗವಹಿಸಿದ್ದ ಆಟಗಾರರಿಗೆ ಮಂಡಳಿಯ ನಿಲುವಿನ ಬಗ್ಗೆ ವೌಖಿಕ ಎಚ್ಚರಿಕೆ ನೀಡಲಾಗಿದೆ. ಇಂತಹ ಅಂಕಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದರಿಂದ ಒಪ್ಪಂದ ಷರತ್ತನ್ನು ಉಲ್ಲಂಘಿಸಬಹುದು ಎಂದು ಬಿಸಿಸಿಐ ಒತ್ತಿ ಹೇಳಿದೆ.
ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್ ಸ್ಕೋರ್ 17.2ನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದೇ ಗೌಪ್ಯ ವಿಷಯವನ್ನು ಪೋಸ್ಟ್ ಮಾಡುವುದನ್ನು ತಪ್ಪಿಸಲು ಆಟಗಾರರಿಗೆ ವೌಖಿಕವಾಗಿ ತಿಳಿಸಲಾಗಿದೆ. ಅವರು ತರಬೇತಿಯ ಸಮಯದಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಬಹುದು. ಆದರೆ ಸ್ಕೋರನ್ನು ಪೋಸ್ಟ್ ಮಾಡುವುದು ಒಪ್ಪಂದ ಷರತ್ತಿನ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.