ರಾಂಚಿ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೆನ್ ಸ್ಟೋಕ್ಸ್
ನಾನು ಭಾರತದಲ್ಲಿ ಇಂತಹ ಪಿಚ್ ಅನ್ನು ಹಿಂದೆಂದೂ ನೋಡಿರಲಿಲ್ಲ ಎಂದ ಇಂಗ್ಲೆಂಡ್ ತಂಡದ ನಾಯಕ
ಬೆನ್ ಸ್ಟೋಕ್ಸ್ | Photo: PTI
ರಾಂಚಿ: ನಾಳೆ(ಶುಕ್ರವಾರ)ಯಿಂದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಾಲ್ಕನೆಯ ಟೆಸ್ಟ್ ಪಂದ್ಯ ಪ್ರಾರಂಭಗೊಳ್ಳಲಿದ್ದು, ಪಂದ್ಯದ ಪ್ರಾರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ರಾಂಚಿ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
NDTV Sports ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, "ದೂರದಿಂದ ನೋಡಿದಾಗ ಪಿಚ್ ಮೇಲೆ ಹುಲ್ಲಿನ ಹೊದಿಕೆ ಇರುವಂತೆ ಕಂಡು ಬರುತ್ತದೆ. ಆದರೆ, ಹತ್ತಿರ ಹೋಗಿ ನೋಡಿದಾಗ ಜಾರಿಕೆ ಮತ್ತು ಬಿರುಕುಗಳು ಕಂಡು ಬರುತ್ತವೆ. ಹೀಗಾಗಿ ಫಲಿತಾಂಶ ಯಾರ ಪರ ವಾಲಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನು ಭಾರತದಲ್ಲಿ ಇಂತಹ ಪಿಚ್ ಅನ್ನು ಹಿಂದೆಂದೂ ನೋಡಿರಲಿಲ್ಲ" ಎಂದು ಹೇಳಿದ್ದಾರೆ.
ಆದರೆ, ತಮ್ಮ ತಂಡದ ನಾಯಕನ ಮಾತಿಗೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿರುವ ಇಂಗ್ಲೆಂಡ್ ತಂಡದ ಉಪ ನಾಯಕ ಓಲಿ ಪೋಪ್, "ಇಲ್ಲಿನ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡುತ್ತದೆ ಎಂಬ ಮಾತೇ ಉಭಯ ತಂಡಗಳಿಗೂ ಈ ಪಿಚ್ ಸಹಕಾರಿಯಾಗಿದೆ ಎಂಬುದನ್ನು ಸೂಚಿಸುತ್ತಿದೆ. ಒಂದು ವೇಳೆ ಮೊದಲ ಬಾಲಿನಿಂದಲೇ ಈ ಪಿಚ್ ತಿರುವು ತೆಗೆದುಕೊಳ್ಳದಿದ್ದರೆ ಹಾಗೂ ಟಾಸ್ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರದಿದ್ದರೆ, ಇದು ಖಂಡಿತ ಸ್ಪರ್ಧಾತ್ಮಕ ಪಿಚ್ ಆಗಿದೆ" ಎಂದು ಹೇಳಿದ್ದಾರೆ.