ವಿಶ್ವಕಪ್ ನಂತರ ಬೆನ್ ಸ್ಟೋಕ್ಸ್ಗೆ ಮೊಣಕಾಲು ಶಸ್ತ್ರಚಿಕಿತ್ಸೆ ಸಾಧ್ಯತೆ
Photo: twitter/benstokes38
ಹೊಸದಿಲ್ಲಿ : ಇಂಗ್ಲೆಂಡ್ನ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಏಕದಿನ ವಿಶ್ವಕಪ್ ಟೂರ್ನಿಯು ಮುಕ್ತಾಯಗೊಂಡ ನಂತರ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ಹೀಗಾಗಿ ಅವರು ಮುಂದಿನ ವರ್ಷ ಭಾರತ ವಿರುದ್ಧ ಐದು ಪಂದ್ಯಗಳ ವಿದೇಶಿ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.
ಪ್ರಮುಖ ಆಲ್ರೌಂಡರ್ ಎಂದೇ ಪರಿಗಣಿಸಲ್ಪಟ್ಟಿರುವ ಸ್ಟೋಕ್ಸ್ ಮೊಣಕಾಲು ನೋವಿನಿಂದಾಗಿ ಸದ್ಯ ಬೌಲಿಂಗ್ ಮಾಡಲು ಕಠಿಣ ಸವಾಲು ಎದುರಿಸುತ್ತಿದ್ದಾರೆ.
ಹಿಂದಿನ ಮೂರು ಆ್ಯಶಸ್ ಟೆಸ್ಟ್ಗಳಲ್ಲಿ ಸ್ಟೋಕ್ಸ್ ಪ್ರಮುಖವಾಗಿ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡಿದ್ದರು. ನ್ಯೂಝಿಲ್ಯಾಂಡ್ ವಿರುದ್ಧ ಮುಂಬರುವ ಏಕದಿನ ಸರಣಿ ಹಾಗೂ ಭಾರತದಲ್ಲಿ ಮುಂದಿನ ತಿಂಗಳು ನಡೆಯುವ ವಿಶ್ವಕಪ್ನಲ್ಲಿ ಬ್ಯಾಟರ್ ಆಗಿಯೇ ಮುಂದುವರಿಯುವ ನಿರೀಕ್ಷೆ ಇದೆ.
ದೀರ್ಘ ಸಮಯದಿಂದ ಕಾಡುತ್ತಿದ್ದ ಮೊಣಕಾಲು ನೋವಿನತ್ತ ಗಮನ ಹರಿಸುವ ಉದ್ದೇಶ ಹೊಂದಿರುವ ಸ್ಟೋಕ್ಸ್ ವಿಶ್ವಕಪ್ನ ನಂತರ ಸರ್ಜರಿಗೆ ಒಳಗಾಗಲಿದ್ದಾರೆ.
ಸ್ಟೋಕ್ಸ್ ನಿವೃತ್ತಿಯ ನಿರ್ಧಾರವನ್ನು ಹಿಂಪಡೆದ ಕಾರಣ ಭಾರತದಲ್ಲಿ ಅ. 5ರಂದು ಆರಂಭವಾಗಲಿರುವ ವಿಶ್ವಕಪ್ನಲ್ಲಿ ಆಡಲಿದ್ದಾರೆ.