124 ಎಸೆತಗಳಲ್ಲಿ 182 ರನ್ ಸಿಡಿಸಿ ದಾಖಲೆ ಬರೆದ ಬೆನ್ ಸ್ಟೋಕ್ಸ್
ಓವಲ್: ಕೇವಲ 124 ಎಸೆತಗಳಲ್ಲಿ 182 ರನ್ ಸಿಡಿಸಿದ ಇಂಗ್ಲೆಂಡ್‍ನ ಖ್ಯಾತ ಬ್ಯಾಟ್ಸ್‍ಮನ್ ಬೆನ್ ಸ್ಟೋಕ್ಸ್, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಪರ ಏಕದಿನ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಇವರ ಸಿಡಿಲಬ್ಬರದ ಬ್ಯಾಟಿಂಗ್‍ನಿಂದ ಓವಲ್‍ನಲ್ಲಿ ಅತಿಥೇಯ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 368 ರನ್ ಕಲೆ ಹಾಕಿದೆ.
ಸ್ಟೋಕ್ಸ್ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಇಂಗ್ಲೆಂಡ್ ಓಟಕ್ಕೆ ಕಡಿವಾಣ ಹಾಕಿದ ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೋಲ್ಟ್ 51 ರನ್‍ಗಳಿಗೆ 5 ವಿಕೆಟ್ ಕಬಳಿಸಿದರು. ಸ್ಟೋಕ್ಸ್ ಔಟ್ ಆದಾಗ 5 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿ ಬೃಹತ್ ಮೊತ್ತ ಕಲೆ ಹಾಕುವ ಸೂಚನೆ ಕಂಡುಬಂದಿತ್ತು. ಆದರೆ ಕೊನೆಯ ಐದು ವಿಕೆಟ್‍ಗಳು ಕೇವಲ 20 ರನ್ ಅಂತರದಲ್ಲಿ ಉರುಳಿದವು. ಈ ಮೂಲಕ ಇನ್ನೂ 11 ಎಸೆತ ಇರುವಂತೆಯೇ ಇಂಗ್ಲೆಂಡ್ ಇನಿಂಗ್ಸ್ ಕೊನೆಗೊಂಡಿತು.
ಬೋಲ್ಟ್ ಆರಂಭಿಕ ಹಂತದಲ್ಲೇ ಇಂಗ್ಲೆಂಡ್‍ಗೆ ಆಘಾತ ನೀಡಿ ಎರಡು ವಿಕೆಟ್ ಕಬಳಿಸಿದ್ದರು. 2 ವಿಕೆಟ್ ನಷ್ಟಕ್ಕೆ 13 ರನ್‍ಗಳಾಗಿದ್ದಾಗ ಸ್ಟೋಕ್ಸ್ ಕ್ರೀಸ್‍ಗೆ ಬಂದಿದ್ದರು. ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯದ ವರೆಗೆ ತಮ್ಮ ನಿವೃತ್ತಿ ನಿರ್ಧಾರವನ್ನು ಮೀಸಲಿಟ್ಟಿರುವ ಸ್ಟೋಕ್ಸ್ ಅದ್ಭುತ ಹೊಡೆತಗಳ ಮೂಲಕ ತಮ್ಮ ಸಾಮಥ್ರ್ಯ ಪ್ರದರ್ಶಿಸಿದರು.
ಬಳಿಕ ದಯನೀಯ ಬ್ಯಾಟಿಂಗ್ ವೈಫಲ್ಯ ಕಂಡ ನ್ಯೂಜಿಲೆಂಡ್ 39 ಓವರ್‍ಗಳಲ್ಲಿ 187 ರನ್‍ಗಳಿಗೆ ಪತನಗೊಂಡಿತು. ಸರಣಿಯ ಮೂರನೇ ಪಂದ್ಯವನ್ನು 181 ರನ್‍ಗಳ ಭಾರಿ ಅಂತರದಲ್ಲಿ ಇಂಗ್ಲೆಂಡ್ ಗೆದ್ದುಕೊಂಡಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಮುಂದಿದೆ.