ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ನಿರ್ಧಾರ ಹಿಂಪಡೆದ ಬೆನ್ ಸ್ಟೋಕ್ಸ್; ಇಂಗ್ಲೆಂಡ್ ಗೆ ಬಲ
photo courtesy : instagram/stokesy
ಲಂಡನ್: ಭಾರತದಲ್ಲಿ ಈ ವರ್ಷ ನಡೆಯುವ 50 ಓವರ್ಗಳ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸುವ ಮೊದಲು ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಿಂದ ನಿವೃತ್ತಿಯಾಗುವ ತನ್ನ ಹಿಂದಿನ ನಿರ್ಧಾರವನ್ನು ಹಿಂಪಡೆದಿದ್ದಾರೆ. ಸ್ಟೋಕ್ಸ್ ಯುಟರ್ನ್ ಪಡೆದಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಗೆ ಬಲ ಬಂದಿದೆ.
ನ್ಯೂಝಿಲ್ಯಾಂಡ್ ವಿರುದ್ಧ ಮುಂಬರುವ ಏಕದಿನ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಟೋಕ್ಸ್ ಗೆ ಸ್ಥಾನ ನೀಡಲಾಗಿದೆ.
ಟೆಸ್ಟ್ ತಂಡದ ನಾಯಕನಾಗಿರುವ ಸ್ಟೋಕ್ಸ್ 13 ತಿಂಗಳ ಹಿಂದೆ 2022ರ ಜುಲೈನಲ್ಲಿ ಏಕದಿನ ಮಾದರಿ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ತನ್ನ ಎಡ ಮೊಣಕಾಲಿನ ನೋವಿನ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದರು. ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ಕೊನೆಗೊಂಡ ಆ್ಯಶಸ್ ಸರಣಿಯ ಕೊನೆಯ 3 ಟೆಸ್ಟ್ ಪಂದ್ಯಗಳಲ್ಲಿ ಗಾಯದ ಕಾರಣಕ್ಕೆ ಅವರು ಬೌಲಿಂಗ್ ಮಾಡಿರಲಿಲ್ಲ.
ಲಾರ್ಡ್ಸ್ ನಲ್ಲಿ 2019ರಲಿ ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧದ ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ತಂಡ ರೋಚಕ ಜಯ ಸಾಧಿಸುವಲ್ಲಿ ಸ್ಟೋಕ್ಸ್ ಮಹತ್ವದ ಪಾತ್ರವಹಿಸಿದ್ದರು. ಅಕ್ಟೋಬರ್ ನಲ್ಲಿ ಭಾರತದಲ್ಲಿ ಆರಂಭವಾಗಲಿರುವ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡ ವಿಶ್ವಕಪ್ ಕಿರೀಟವನ್ನು ತನ್ನಲ್ಲೇ ಉಳಿಸಿಕೊಳ್ಳಲು ಸ್ಟೋಕ್ಸ್ ಸ್ಪೆಷಲಿಷ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂದಿನ ತಿಂಗಳಲ್ಲಿ ಇಂಗ್ಲೆಂಡ್ ತನ್ನ ತವರು ನೆಲದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 4 ಏಕದಿನ ಪಂದ್ಯಗಳನ್ನು ಆಡಲಿದೆ. ಬುಧವಾರ ಪ್ರಕಟಿಸಲಾಗಿರುವ 15 ಆಟಗಾರರ ಇಂಗ್ಲೆಂಡ್ ತಂಡದಲ್ಲಿ ಸ್ಟೋಕ್ಸ್ ಗೆ ಮಣೆ ಹಾಕಲಾಗಿದೆ.
ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹಾಗೂ ನಾಯಕತ್ವವನ್ನು ಹೊಂದಿರುವ ಸ್ಟೋಕ್ಸ್ ಮರಳಿಕೆಯು ತಂಡಕ್ಕೆ ಬಲ ನೀಡಲಿದೆ. ಅವರು ಮತ್ತೊಮ್ಮೆ ಇಂಗ್ಲೆಂಡ್ನ ಏಕದಿನ ಶರ್ಟ್ನಲ್ಲಿ ಕಾಣಿಸಿಕೊಳ್ಳುವುದನ್ನು ಪ್ರತಿಯೊಬ್ಬ ಅಭಿಮಾನಿ ಆನಂದಿಸುತ್ತಾನೆಂಬ ಕುರಿತು ನನಗೆ ಖಚಿತತೆ ಇದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ಟೀಮ್ ಸೆಲೆಕ್ಟರ್ ಲ್ಯುಕ್ ರೈಟ್ ಹೇಳಿದ್ದಾರೆ.