ನೀರಿನ ಸಮಸ್ಯೆ ಹಿನ್ನೆಲೆ | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀರಿನ ಬಳಕೆಯ ಬಗ್ಗೆ ಮಾಹಿತಿ ನೀಡಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಎನ್ ಜಿ ಟಿ ಸೂಚನೆ
ಹೊಸದಿಲ್ಲಿ: ಉದ್ಯಾನನಗರಿಯಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿ ಟಿ ) ಬೆಂಗಳೂರಿನ ಐಪಿಎಲ್ ಪಂದ್ಯಗಳ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀರಿನ ಬಳಕೆಯ ಬಗ್ಗೆ ಮಾಹಿತಿ ನೀಡುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಇತರ ಸಂಬಂಧಿತ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದೆ.
ರಾಜ್ಯ ಕ್ರಿಕೆಟ್ ಸಂಸ್ಥೆಯ ಜೊತೆಗೆ, ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬಳಸುತ್ತಿರುವ ನೀರಿನ ಪ್ರಮಾಣ ಹಾಗೂ ಮೂಲದ ಬಗ್ಗೆ ವಿವರಗಳನ್ನು ನೀಡಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸಮನ್ಸ್ ನೀಡಿದೆ. ಈ ಎಲ್ಲ ವಿವರಗಳನ್ನು ಸಲ್ಲಿಸಲು ಮೇ 2ಕ್ಕೆ ಗಡುವು ನಿಗದಿಪಡಿಸಲಾಗಿದೆ.
ನಾವು ಸೂಚನೆಯನ್ನು ಪರಿಶೀಲನೆ ಮಾಡುತ್ತಿದ್ದೇವೆ. ಕ್ರೀಡಾಂಗಣವು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಮಾನದಂಡಗಳನ್ನು ಅನುಸರಿಸುತ್ತದೆ. ಹೀಗಾಗಿ ಪಂದ್ಯಗಳನ್ನು ಮುಂದುವರಿಸುವ ವಿಶ್ವಾಸವಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ ಎಸ್ ಸಿ ಎ)ಸಿಇಒ ಶುಭೇಂದು ಘೋಷ್ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್ ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಬಳಸುತ್ತಿದೆ ಎಂಬ ವರದಿಗಳ ನಂತರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ತನ್ನದೇ ಆದ (ಸುಮೊಟೊ) ಕ್ರಮವನ್ನು ಆರಂಭಿಸಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಹಾಗೂ ತಜ್ಞ ಸದಸ್ಯ ಡಾ. ಎ. ಸೆಂಥಿಲ್ ವೇಲ್ ಅವರು ಪ್ರಕರಣ ದಾಖಲಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ನಡೆಸಲಾಗಿದ್ದು, ಈ ಪ್ರತಿಯೊಂದು ಪಂದ್ಯಕ್ಕೆ 75,000 ಲೀಟರ್ ಸಂಸ್ಕರಿಸಿದ ನೀರನ್ನು ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ.
ಇದೇ ಕ್ರೀಡಾಂಗಣದಲ್ಲಿ ಎಪ್ರಿಲ್ 15(ಸನ್ರೈಸರ್ಸ್ ಹೈದರಾಬಾದ್ ವಿರುದ್ಧ), ಮೇ 4(ಗುಜರಾತ್ ಟೈಟಾನ್ಸ್ ವಿರುದ್ಧ), ಮೇ 12(ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ) ಹಾಗೂ ಮೇ 18(ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ)ನಾಲ್ಕು ಐಪಿಎಲ್ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಪಂದ್ಯದ ಉದ್ದೇಶಗಳಿಗಾಗಿ ನಮಗೆ ಸುಮಾರು 15,000 ಲೀಟರ್ ನೀರು ಬೇಕಾಗಬಹುದು ಅದನ್ನು ಎಸ್ಟಿಪಿ ಸ್ಥಾವರದಿಂದ ಉತ್ಪಾದಿಸಬಹುದು ಎಂದು ಘೋಷ್ ಈ ಹಿಂದೆ ಹೇಳಿದ್ದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮನವಿಯ ಮೇರೆಗೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಕ್ರೀಡಾಂಗಣಕ್ಕೆ ಸಮೀಪದ ಕಬ್ಬನ್ ಪಾರ್ಕ್ ಪ್ರದೇಶದಿಂದ ಸಂಸ್ಕರಿಸಿದ ನೀರನ್ನು ಒದಗಿಸಲು ಅಧಿಕಾರ ನೀಡಿದೆ ಎಂಬ ಹೇಳಿಕೆಯನ್ನು ಎನ್ ಜಿ ಟಿ ಒಪ್ಪಿಕೊಂಡಿದೆ.
ಕರ್ನಾಟಕ ಸರಕಾರವು ತೋಟಗಾರಿಕೆ ಹಾಗೂ ವಾಹನ ತೊಳೆಯುವ ಅನಿವಾರ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದರ ಮೇಲೆ ಕಟ್ಟುನಿಟ್ಟಾದ ನಿಷೇಧ ಜಾರಿಗೊಳಿಸಿದೆ.