ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಶುಭಮನ್ ಗಿಲ್ ಶತಕ, ಮುಹಮ್ಮದ್ ಶಮಿಗೆ ಐದು ವಿಕೆಟ್

ಶುಭಮನ್ ಗಿಲ್ , ಮುಹಮ್ಮದ್ ಶಮಿ | PC : X
ದುಬೈ: ಶುಭಮನ್ ಗಿಲ್ ಆಕರ್ಷಕ ಶತಕದ (ಔಟಾಗದೆ 101, 129 ಎಸೆತ, 9 ಬೌಂಡರಿ, 2 ಸಿಕ್ಸರ್)ಹಾಗೂ ವೇಗದ ಬೌಲರ್ ಮುಹಮ್ಮದ್ ಶಮಿ (5-53) ಅಮೋಘ ಬೌಲಿಂಗ್ ಸಹಾಯದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಕ್ರಿಕೆಟ್ ತಂಡವು 6 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಪಂದ್ಯಾವಳಿಯಲ್ಲಿ ಗೆಲುವಿನ ಆರಂಭ ಪಡೆದಿದೆ.
ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 229 ರನ್ ಗುರಿ ಪಡೆದಿದ್ದ ಭಾರತ ತಂಡವು ಸತತ 4ನೇ ಇನಿಂಗ್ಸ್ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ ಗಿಲ್ ನೆರವಿನಿಂದ 46.3 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 231 ರನ್ ಗಳಿಸಿದೆ.
ನಾಯಕ ರೋಹಿತ್ ಶರ್ಮಾ(41 ರನ್, 36 ಎಸೆತ)ಹಾಗೂ ಗಿಲ್ ಮೊದಲ ವಿಕೆಟ್ಗೆ 69 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರೋಹಿತ್, ವಿರಾಟ್ ಕೊಹ್ಲಿ(22 ರನ್)ಹಾಗೂ ಶ್ರೇಯಸ್ ಅಯ್ಯರ್(15 ರನ್) ವಿಕೆಟ್ ಒಪ್ಪಿಸಿದ ನಂತರ ಕೆ.ಎಲ್.ರಾಹುಲ್(ಔಟಾಗದೆ 41, 47 ಎಸೆತ, 1 ಬೌಂಡರಿ, 2 ಸಿಕ್ಸರ್)ಜೊತೆ ಕೈಜೋಡಿಸಿದ ಗಿಲ್ 5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 87 ರನ್ ಸೇರಿಸಿ ಇನ್ನೂ 21 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಗಿಲ್ 125 ಎಸೆತಗಳಲ್ಲಿ ತನ್ನ 8ನೇ ಏಕದಿನ ಶತಕ ಪೂರೈಸಿದರು. ಹೆಲ್ಮೆಟ್ ತೆಗೆದು, ರಾಹುಲ್ ರನ್ನು ತಬ್ಬಿಕೊಂಡು ಶತಕವನ್ನು ಸಂಭ್ರಮಿಸಿದರು. ಇಂಗ್ಲೆಂಡ್ ವಿರುದ್ಧ 87,60, 112 ಗಳಿಸಿದ್ದ ಗಿಲ್ ಶ್ರೇಷ್ಠ ಫಾರ್ಮ್ ಮುಂದುವರಿಸಿದರು.
►ಶಮಿಗೆ ಐದು ವಿಕೆಟ್, ಬಾಂಗ್ಲಾದೇಶ 228 ರನ್ಗೆ ಆಲೌಟ್
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ತಂಡವು ಮುಹಮ್ಮದ್ ಶಮಿ(5-53)ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ 49.4 ಓವರ್ಗಳಲ್ಲಿ 228 ರನ್ಗೆ ಆಲೌಟಾಯಿತು.
ಶಮಿ ಅವರು ಪವರ್ ಪ್ಲೇ ಹಾಗೂ ಡೆತ್ ಓವರ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಐಸಿಸಿ ಏಕದಿನ ಟೂರ್ನಿಯಲ್ಲಿ 5ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಶಮಿಗೆ ಹರ್ಷಿತ್ ರಾಣಾ(3-31)ಹಾಗೂ ಅಕ್ಷರ್ ಪಟೇಲ್(2-43) ಸಮರ್ಥ ಸಾಥ್ ನೀಡಿದರು.
ಒಂದು ಹಂತದಲ್ಲಿ 35 ರನ್ಗೆ 5 ವಿಕೆಟ್ಗಳನ್ನು ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡವು ಭಾರತದ ಕಳಪೆ ಫೀಲ್ಡಿಂಗ್ನ ಲಾಭ ಪಡೆದು ಸ್ಪರ್ಧಾತ್ಮಕ ಮೊತ್ತ ಗಳಿಸಿತು. ತೌಹೀದ್ ಹ್ರಿದಾಯ್ ಹಾಗೂ ಜಾಕರ್ ಅಲಿ 6ನೇ ವಿಕೆಟ್ಗೆ 154 ರನ್ ಜೊತೆಯಾಟ ನಡೆಸಿ ಬಾಂಗ್ಲಾ ತಂಡ ಚೇತರಿಸಿಕೊಳ್ಳುವಲ್ಲಿ ದೊಡ್ಡ ಕೊಡುಗೆ ನೀಡಿದರು. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ 6ನೇ ವಿಕೆಟ್ನಲ್ಲಿ ಗರಿಷ್ಠ ರನ್ ಜೊತೆಯಾಟದಲ್ಲಿ ಭಾಗಿಯಾದರು.
ಜಾಕರ್ ಅಲಿ 114 ಎಸೆತಗಳಲ್ಲಿ 68 ರನ್ ಗಳಿಸಿದರೆ, ತೌಹೀದ್ 114 ಎಸೆತಗಳಲ್ಲಿ ತನ್ನ ಚೊಚ್ಚಲ ಅಂತರ್ರಾಷ್ಟ್ರೀಯ ಶತಕವನ್ನು (100 ರನ್, 118 ಎಸೆತ)ಗಳಿಸಿದರು.
ಸೌಮ್ಯ ಸರ್ಕಾರ್(0) ವಿಕೆಟನ್ನು ಪಡೆದ ಶಮಿ ಭಾರತಕ್ಕೆ ಆರಂಭಿಕ ಮೇಲುಗೈ ಒದಗಿಸಿದರು. ಹರ್ಷಿತ್ ರಾಣಾ ಅವರು ನಾಯಕ ನಜ್ಮುಲ್ ಹಸನ್(0)ಅವರನ್ನು ಔಟ್ ಮಾಡಿದರು. ಮೆಹದಿ ಹಸನ್(5) ,ತಂಝೀದ್ ಹಸನ್ (25)ಹಾಗೂ ಮುಶ್ಫಿಕುರ್ರಹೀಂ(0)ಔಟಾದಾಗ ಬಾಂಗ್ಲಾದೇಶ 35 ರನ್ಗೆ 5 ವಿಕೆಟ್ ಕಳೆದುಕೊಂಡಿತು. ಆ ನಂತರ ಜಾಕರ್ ಹಾಗೂ ತೌಹೀದ್ ಪ್ರತಿರೋಧ ಒಡ್ಡಿದರು. ಹಾರ್ದಿಕ್ ಪಟೇಲ್, ತೌಹೀದ್ 23 ರನ್ ಗಳಿಸಿದ್ದಾಗ ಜೀವದಾನ ನೀಡಿದರು.