ಬಾರ್ಡರ್-ಗವಾಸ್ಕರ್ ಟ್ರೋಫಿ : ಗಾಯಾಳು ಗ್ರೀನ್ ಸ್ಥಾನಕ್ಕೆ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಗೆ ಅವಕಾಶ ಸಾಧ್ಯತೆ
ಮೆಲ್ಬರ್ನ್ : ಮುಂದಿನ ತಿಂಗಳು ಭಾರತ ವಿರುದ್ಧ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಗಾಯಗೊಂಡಿರುವುದರಿಂದ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಗೆ ಅವಕಾಶದ ಬಾಗಿಲು ತೆರೆಯುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಮಾರ್ಕ್ ಟೇಲರ್ ಅಭಿಪ್ರಾಯಪಟ್ಟಿದ್ದಾರೆ.
ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಕ್ಯಾಮರೂನ್ ಗ್ರೀನ್ ತವರಿನಲ್ಲಿ ಭಾರತ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
25ರ ಹರೆಯದ ಆಲ್ರೌಂಡರ್ ಗ್ರೀನ್ ಗೆ ಈ ಹಿಂದೆಯೇ ಬೆನ್ನುನೋವು ಕಾಣಿಸಿಕೊಂಡಿತ್ತು. 2019ರಿಂದ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಗ್ರೀನ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯ ತಂಡವು ತನ್ನ ಬ್ಯಾಟಿಂಗ್ ಸರದಿಯನ್ನು ಬದಲಿಸಬೇಕಾಗಿದೆ.
ಡೇವಿಡ್ ವಾರ್ನರ್ ಈ ವರ್ಷಾರಂಭದಲ್ಲಿ ನಿವೃತ್ತಿ ಪ್ರಕಟಿಸಿದ ಕಾರಣ ಅವರಿಂದ ತೆರವಾದ ಆರಂಭಿಕನ ಸ್ಥಾನ ತುಂಬಲು ಬ್ಯಾಂಕ್ರಾಫ್ಟ್ ಮುಂದಾಗಿದ್ದರು. ಆದರೆ, ಆಯ್ಕೆಗಾರರು ಗ್ರೀನ್ಗೆ ಮಣೆ ಹಾಕಿದ್ದರು. ಸ್ಟೀವ್ ಸ್ಮಿತ್ ಗೆ ಇನಿಂಗ್ಸ್ ಆರಂಭಿಸುವ ಹೊಣೆ ನೀಡಲಾಗಿತ್ತು.
ಹಿರಿಯ ಬ್ಯಾಟರ್ ಸ್ಮಿತ್ ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ.
ಸ್ಮಿತ್ ಮತ್ತೊಮ್ಮೆ 4ನೇ ಕ್ರಮಾಂಕಕ್ಕೆ ಮರಳಬೇಕು. ಆಗ ಇನಿಂಗ್ಸ್ ಯಾರು ಆರಂಭಿಸುತ್ತಾರೆಂಬ ಪ್ರಶ್ನೆ ಏಳುತ್ತದೆ. ಬಲಗೈ ಆರಂಭಿಕ ಬ್ಯಾಟರ್ ಈ ಅವಕಾಶ ಪಡೆಯುವುದನ್ನು ನಾನು ಬಯಸುವೆ. ಬ್ಯಾಂಕ್ರಾಫ್ಟ್ ಅವರು ಉಸ್ಮಾನ್ ಖ್ವಾಜಾರೊಂದಿಗೆ ಇನಿಂಗ್ಸ್ ಆರಂಭಿಸಬೇಕು ಎಂದು ಟೇಲರ್ ಅಭಿಪ್ರಾಯಪಟ್ಟಿದ್ದಾರೆ.
2018ರ ಚೆಂಡು ವಿರೂಪ ಘಟನೆಯಲ್ಲಿ ಭಾಗಿಯಾದ ತಪ್ಪಿಗೆ ಬ್ಯಾಂಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. ಕಳೆದ ಎರಡು ವರ್ಷಗಳಿಂದ ಶೀಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಅಗ್ರ ರನ್ ಸ್ಕೋರರ್ ಆಗಿದ್ದಾರೆ.
ಭಾರತ-ಆಸ್ಟ್ರೇಲಿಯ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಪರ್ತ್ನಲ್ಲಿ ನವೆಂಬರ್ 22ರಿಂದ ಆರಂಭವಾಗಲಿದೆ.
..............