ಬಾರ್ಡರ್-ಗಾವಸ್ಕರ್ ಟ್ರೋಫಿ: ಕುತೂಹಲಕರ ಘಟ್ಟದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್
ಮತ್ತೆ ನಾಲ್ಕು ವಿಕೆಟ್ ಕಿತ್ತು ಮಿಂಚಿದ ಬುಮ್ರಾ
PC: PTI
ಮೆಲ್ಬರ್ನ್: ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಕುತೂಹಲಕರ ಘಟ್ಟ ತಲುಪಿದ್ದು, ನಾಲ್ಕನೆ ದಿನದಾಟದ ಟೀ ವಿರಾಮದ ವೇಳೆಗೆ ಆಸ್ಟ್ರೇಲಿಯ ತಂಡವು ತನ್ನ ಎರಡನೆ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಇದರೊಂದಿಗೆ ತಂಡದ ಒಟ್ಟು ಮುನ್ನಡೆ 240 ರನ್ ಗಳಿಗೆ ಏರಿದೆ.
ಇದಕ್ಕೂ ಮುನ್ನ, ನಿನ್ನೆ ತನ್ನ ಪ್ರಥಮ ಇನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದ್ದ ಭಾರತ ತಂಡ, ಇಂದು ತನ್ನ ಮೊತ್ತಕ್ಕೆ ಕೇವಲ 11 ರನ್ ಸೇರಿಸಲಷ್ಟೆ ಶಕ್ತವಾಗಿ 369 ರನ್ ಗಳಿಗೆ ಆಲೌಟ್ ಆಯಿತು. 114 ರನ್ ಗಳಿಸಿದ ನಿತೀಶ್ ಕುಮಾರ್ ರೆಡ್ಡಿ, ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ನಥಾನ್ ಲಿಯಾನ್ ಗೆ ಕ್ಯಾಚಿತ್ತು ಔಟಾದರು. 4 ರನ್ ಗಳಿಸಿದ ಮುಹಮ್ಮದ್ ಸಿರಾಜ್ ಅಜೇಯರಾಗಿ ಉಳಿದರು.
ನಂತರ, ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಆಘಾತ ನೀಡಿದರು. ಮೊದಲ ಇನಿಂಗ್ಸ್ ನಲ್ಲಿ ಬಿರುಸಿನ ಅರ್ಧ ಶತಕ ಗಳಿಸಿದ್ದ ಆರಂಭಿಕ ಆಟಗಾರ ಸ್ಯಾಮ್ ಕೊನ್ಸ್ಟಾಸ್ ಕೇವಲ 8 ರನ್ ಗಳಿಸಿದ್ದಾಗ, ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆಗ ಆಸ್ಟ್ರೇಲಿಯ ತಂಡದ ಮೊತ್ತ ಕೇವಲ 20 ರನ್ ಆಗಿತ್ತು.
ಇದಾದ ನಂತರ, ಉಸ್ಮಾನ್ ಖ್ವಾಜಾ (21), ಸ್ಟೀವ್ ಸ್ಮಿತ್ (13), ಟ್ರಾವಿಸ್ ಹೆಡ್ (1), ಮಿಚೆಲ್ ಮಾರ್ಷ್ (0) ಹಾಗೂ ಅಲೆಕ್ಸ್ ಕ್ಯಾರಿ (2) ಪೆವಿಲಿಯನ್ ಪೆರೇಡ್ ನಡೆಸಿದರು.
ತಮ್ಮ ಬಿರುಗಾಳಿ ಬೌಲಿಂಗ್ ನಿಂದ ಕಾಂಗರೂ ಬ್ಯಾಟರ್ ಗಳನ್ನು ಮತ್ತೊಮ್ಮೆ ಕಂಗೆಡಿಸಿದ ಬುಮ್ರಾ ನಾಲ್ಕು ಪ್ರಮುಖ ವಿಕೆಟ್ ಗಳನ್ನು ಕಿತ್ತು ಆಸ್ಟ್ರೇಲಿಯ ತಂಡಕ್ಕೆ ಮರ್ಮಾಘಾತ ನೀಡಿದರು. ಮತ್ತೊಂದು ತುದಿಯಲ್ಲಿ ಪರಿಣಾಮಕಾರಿ ದಾಳಿ ನಡೆಸಿದ ಮುಹಮ್ಮದ್ ಸಿರಾಜ್ ಕೂಡಾ ಎರಡು ಪ್ರಮುಖ ವಿಕೆಟ್ ಗಳನ್ನು ಕಿತ್ತು ಆಸ್ಟ್ರೇಲಿಯ ಚೇತರಿಸಿಕೊಳ್ಳದಂತೆ ನೋಡಿಕೊಂಡರು.
ಸದ್ಯ, ಅಜೇಯ 65 ರನ್ ಗಳಿಸಿರುವ ಮಾರ್ನಸ್ ಲಾಬುಶೇನ್ ಹಾಗೂ ಅಜೇಯ 21 ರನ್ ಗಳಿಸಿರುವ ನಾಯಕ ಪ್ಯಾಟ್ ಕಮಿನ್ಸ್ ಕ್ರೀಸಿನಲ್ಲಿದ್ದಾರೆ.