ಬಾರ್ಡರ್-ಗವಾಸ್ಕರ್ ಟ್ರೋಫಿ | ʼಬಾಕ್ಸಿಂಗ್ ಡೇ ಟೆಸ್ಟ್ʼ ನಲ್ಲಿ ಭಾರತದ ದಾಖಲೆ ಹೇಗಿದೆ?
Photo credit: PTI
ಹೊಸದಿಲ್ಲಿ: ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಪ್ರತಿಷ್ಠಿತ ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ನಡೆಯಲಿದ್ದು, ಇದು ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಗೆ ನಿರ್ಣಾಯಕ ಘಟ್ಟ ಎನಿಸಿಕೊಂಡಿದೆ.
ಉಭಯ ತಂಡಗಳು ಅಸ್ಥಿರ ಬ್ಯಾಟಿಂಗ್, ಇತ್ತೀಚೆಗಿನ ಬದಲಾವಣೆಗಳ ಪರಿಣಾಮಗಳು ಸೇರಿದಂತೆ ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ.
ಆರ್.ಅಶ್ವಿನ್ ಅವರ ಅನಿರೀಕ್ಷಿತ ನಿರ್ಧಾರ ಭಾರತ ತಂಡದ ಮೇಲೆ ಪರಿಣಾಮಬೀರಲಿದ್ದು, ಆಸ್ಟ್ರೇಲಿಯದ ಅಗ್ರ ಕ್ರಮಾಂಕದ ಆಟಗಾರರು ರನ್ಗಾಗಿ ಪರದಾಡುತ್ತಿದ್ದಾರೆ.
ಮತ್ತೊಂದು ರೋಚಕ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಸ್ಮರಣೀಯ ಅಧ್ಯಾಯದ ಭರವಸೆ ಮೂಡಿಸಿದೆ.
►ಬಾಕ್ಸಿಂಗ್ ಡೇ ಟೆಸ್ಟ್ ಎಂದರೇನು?
ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್ನ ಅತ್ಯಾಕರ್ಷಕ ಪಂದ್ಯವಾಗಿದ್ದು, ಈ ಪಂದ್ಯವು ಪ್ರತಿ ವರ್ಷ ಡಿಸೆಂಬರ್ 26ರಂದು ಎಂಸಿಜಿಯಲ್ಲಿ ಆರಂಭವಾಗಲಿದೆ. ಬಾಕ್ಸಿಂಗ್ ಡೇ ಟೆಸ್ಟ್ ವಿಶ್ವದಾದ್ಯಂತ ಕ್ರಿಕೆಟ್ ಉತ್ಸಾಹಿಗಳ ಹೃದಯಗಳಲ್ಲಿ ವಿಶೇಷ ಸ್ಥಾನ ಪಡೆದಿದೆ.
►ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತದ ದಾಖಲೆ
ಎಂಸಿಜಿಯಲ್ಲಿ ನಡೆದಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವು ಮಿಶ್ರ ಫಲಿತಾಂಶಗಳನ್ನು ಪಡೆದಿದೆ.
14 ಪಂದ್ಯಗಳಲ್ಲಿ ಭಾರತ ತಂಡವು 4ರಲ್ಲಿ ಜಯ, 8ರಲ್ಲಿ ಸೋಲು ಹಾಗೂ ಎರಡರಲ್ಲಿ ಡ್ರಾ ಸಾಧಿಸಿದೆ.
2020ರಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅಜಿಂಕ್ಯ ರಹಾನೆ ನೇತೃತ್ವದ ಭಾರತ ತಂಡವು 8 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತ್ತು. ಅಡಿಲೇಡ್ನಲ್ಲಿ ಕೇವಲ 36 ರನ್ಗೆ ಆಲೌಟಾದ ಕೆಲವೇ ದಿನಗಳ ನಂತರ ಈ ಫಲಿತಾಂಶ ದಾಖಲಿಸಿತ್ತು.
ಮೊದಲ ಇನಿಂಗ್ಸ್ನಲ್ಲಿ ರಹಾನೆ ಶತಕ(112 ರನ್)ಗಳಿಸಿದ್ದರು. ನಾಯಕನ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದ ಬೌಲರ್ಗಳು ಒಗ್ಗಟ್ಟಿನ ಪ್ರದರ್ಶನ ನೀಡಿ ಆಸ್ಟ್ರೇಲಿಯ ತಂಡವನ್ನು ಕಟ್ಟಿಹಾಕಿತ್ತು. ಗಾಯದ ಸಮಸ್ಯೆಗಳು ಹಾಗೂ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಈ ಗೆಲುವು ಭಾರತದ ಒಂದು ಶ್ರೇಷ್ಠ ಗೆಲುವಾಗಿ ಉಳಿದುಕೊಂಡಿದೆ.