ಬಾಕ್ಸಿಂಗ್ ಡೇ ಟೆಸ್ಟ್ | ಕಾನ್ಸ್ಟಾಸ್ ಭುಜಕ್ಕೆ ಢಿಕ್ಕಿ ಹೊಡೆದ ವಿರಾಟ್ ಕೊಹ್ಲಿ; ವ್ಯಾಪಕ ಆಕ್ರೋಶ
ಕೊಹ್ಲಿಗೆ ದಂಡ ವಿಧಿಸಿದ ಐಸಿಸಿ
ಸ್ಯಾಮ್ ಕಾನ್ಸ್ಟಾಸ್ , ವಿರಾಟ್ ಕೊಹ್ಲಿ | PC : @7Cricket
ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನವಾದ ಗುರುವಾರ ಆಸ್ಟ್ರೇಲಿಯದ ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಭುಜಕ್ಕೆ ಭಾರತದ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಡಿಕ್ಕಿಯಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದಲ್ಲಿ ಶೇ.20ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ಸ್ ನೀಡಲಾಗಿದೆ.
ಆಸ್ಟ್ರೇಲಿಯ ಇನಿಂಗ್ಸ್ನ 10ನೇ ಓವರ್ನಲ್ಲಿ ಕೊಹ್ಲಿ ಅವರು ಕಾನ್ಸ್ಟಾಸ್ಗೆ ಡಿಕ್ಕಿ ಹೊಡೆದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಕಾನ್ಸ್ಟಾಸ್ ಸಹ ಆಟಗಾರ ಉಸ್ಮಾನ್ ಖ್ಜಾಜಾ ಇಬ್ಬರನ್ನೂ ಸಮಾಧಾನಪಡಿಸಿದರು. ಅಂಪೈರ್ಗಳು ಇಬ್ಬರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ಮೆಲ್ಬರ್ನ್ ಪ್ರೇಕ್ಷಕರು ಕೊಹ್ಲಿ ಅವರನ್ನು ಹೀಯಾಳಿಸಿದರು. ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಸೆವೆನ್ ನೆಟ್ವರ್ಕ್ಗಾಗಿ ನಡೆಸಿದ ವೀಕ್ಷಕವಿವರಣೆ ವೇಳೆ ಕೊಹ್ಲಿ ಅವರ ವರ್ತನೆಯನ್ನು ಖಂಡಿಸಿದರು.
ಈ ಘಟನೆಯ ವೇಳೆ ಕಾನ್ಸ್ಟಾಸ್ 27 ರನ್ ಗಳಿಸಿದ್ದು, ಮುಂದಿನ ಓವರ್ನಲ್ಲಿ ಬುಮ್ರಾ ಬೌಲಿಂಗ್ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ರವೀಂದ್ರ ಜಡೇಜಗೆ ವಿಕೆಟ್ ಒಪ್ಪಿಸುವ ಮೊದಲು ಕಾನ್ಸ್ಟಾಸ್ ಮಿಂಚಿನ ವೇಗದಲ್ಲಿ ಅರ್ಧಶತಕ ಗಳಿಸಿದರು.
ಐಸಿಸಿ ನೀತಿ ಸಂಹಿತೆ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕೆ ವಿರಾಟ್ ಕೊಹ್ಲಿ ಅವರಿಗೆ ಪಂದ್ಯ ಶುಲ್ಕದಲ್ಲಿ ಶೇ.20ರಷ್ಟು ದಂಡ ವಿಧಿಸಲಾಗಿದೆ. ಒಂದು ಡಿಮೆರಿಟ್ ನೀಡಲಾಗಿದೆ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಯಾವುದೇ ವಿಚಾರಣೆ ನಡೆಸಲಾಗಿಲ್ಲ, ಕೊಹ್ಲಿ ಅವರು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಪ್ರಸ್ತಾವಿಸಿದ ಶಿಕ್ಷೆಯನ್ನು ಸ್ವೀಕರಿಸಿದರು ಎಂದು ಐಸಿಸಿ ತಿಳಿಸಿದೆ.
ಅದೃಷ್ಟವಶಾತ್ ಕೊಹ್ಲಿ ಅವರದ್ದು ಲೆವೆಲ್2 ತಪ್ಪೆಂದು ಪರಿಗಣಿಸಲಾಗಿಲ್ಲ. ಹಾಗೆ ಪರಿಣಿಸಿದ್ದರೆ ಮೂರರಿಂದ 4 ಡಿಮೆರಿಟ್ ಪಾಯಿಂಟ್ಗಳ ದಂಡ ತೆರಬೇಕಾಗುತ್ತಿತ್ತು. 4 ಡಿಮೆರಿಟ್ ಅಂಕಗಳು ಸಿಡ್ನಿಯಲ್ಲಿ ನಡೆಯಲಿರುವ ಮುಂಬರುವ 5ನೇ ಟೆಸ್ಟ್ ಪಂದ್ಯದಿಂದ ಅಮಾನತಿಗೆ ಕಾರಣವಾಗುತ್ತಿತ್ತು.