ಬಾಕ್ಸಿಂಗ್ | ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ನಿಶಾಂತ್ ದೇವ್
ನಿಶಾಂತ್ ದೇವ್ | PC : olympics.com
ಹೊಸದಿಲ್ಲಿ : ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಬಾಕ್ಸರ್ ನಿಶಾಂತ್ ದೇವ್ ಆಗಿದ್ದಾರೆ. ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಶುಕ್ರವಾರ ಸೆಮಿಫೈನಲ್ ತಲುಪುವ ಮೂಲಕ ಅವರು ಈ ಅರ್ಹತೆ ಪಡೆದಿದ್ದಾರೆ.
ಹಿಂದೆ ಒಲಿಂಪಿಕ್ ಅರ್ಹತೆ ಪಡೆಯಲು ವಿಫಲರಾಗಿದ್ದ ದೇವ್, ಶುಕ್ರವಾರ 71 ಕೆಜಿ ವಿಭಾಗದ ಸ್ಪರ್ಧೆಯ ಕ್ವಾರ್ಟರ್ಫೈನಲ್ನಲ್ಲಿ ಮೋಲ್ಡೋವದ ವಸೈಲ್ ಸೆಬೊಟರಿಯನ್ನು 5-0 ಅಂಕಗಳಿಂದ ಸೋಲಿಸಿದರು.
ಭಾರತ ಈಗ ಒಲಿಂಪಿಕ್ಸ್ಗೆ ನಾಲ್ಕು ಕೊಟಗಳನ್ನು ಪಡೆದಂತಾಗಿದೆ. ಮಹಿಳಾ ಬಾಕ್ಸರ್ಗಳಾದ ನಿಖತ್ ಝರೀನ್ (50 ಕೆಜಿ), ಪ್ರೀತ್ ಪವಾರ್ (54 ಕೆಜಿ) ಮತ್ತು ಲವ್ಲೀನಾ ಬೊರ್ಗೊಹೈನ್ (75 ಕೆಜಿ) ಈಗಾಗಲೇ ಪ್ಯಾರಿಸ್ಗೆ ಟಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. 71 ಕೆಜಿ ವಿಭಾಗದಲ್ಲಿ ಒಟ್ಟು ಐದು ಕೋಟಗಳು ಲಭ್ಯವಿವೆ.
ಆದರೆ, ಮಹಿಳೆಯರ 60 ಕೆಜಿ ವಿಭಾಗದಲ್ಲಿ ಕೋಟವೊಂದನ್ನು ಸಂಪಾದಿಸುವ ಭಾರತದ ಕನಸು ವಿಫಲವಾಯಿತು. ಕ್ವಾರ್ಟರ್ಫೈನಲ್ನಲ್ಲಿ, ಭಾರತದ ಅಂಕುಶಿತಾ ಬೋರೊ ಅವರನ್ನು ಸ್ವೀಡನ್ನ ಆ್ಯಗ್ನೆಸ್ ಅಲೆಕ್ಸಿಯಸನ್ 3-2 ಅಂಕಗಳಿಂದ ಸೋಲಿಸಿದರು.