ಬ್ರಿಜ್ ಭೂಷಣ್ ಸಿಂಗ್, ಕುಸ್ತಿ ಫೆಡರೇಷನ್ನ ಅಧ್ಯಕ್ಷನಿಂದ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಡ್ಡಿ: ವಿನೇಶ್ ಫೋಗಟ್ ಆರೋಪ
ವಿನೇಶ್ ಫೋಗಟ್ (PTI)
ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಹೊತ್ತ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತವರ ಡಮ್ಮಿಯಾಗಿರುವ ಈಗಿನ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ನಾನು ಭಾಗವಹಿಸದೇ ಇರುವಂತೆ ಸರ್ವ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು 2022 ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಆರೋಪಿಸಿದ್ದಾರೆ.
ತಮ್ಮ ಸಹಾಯಕ ಸಿಬ್ಬಂದಿಗಳಿಗೆ ಅಡ್ಡಿಪಡಿಸಲಾಗುತ್ತಿದೆ ಹಾಗೂ ತಮ್ಮನ್ನು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸುವ ಭಯವೂ ಇದೆ ಎಂದು 29 ವರ್ಷದ ವಿನೇಶ್ ಫೋಗಟ್ ಹೇಳಿದ್ದಾರೆ.
2018 ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತೆಯೂ ಆಗಿರುವ ಫೋಗಟ್ ಮುಂದುವರಿದು ಮಾತನಾಡುತ್ತಾ, ಕುಸ್ತಿ ತಂಡದ ಎಲ್ಲಾ ಕೋಚ್ಗಳು ಬ್ರಿಜ್ ಭೂಷಣ್ ಮತ್ತವರ ತಂಡದ ಮೆಚ್ಚಿನವರು. ಹಾಗಿರುವಾಗ ಅವರು ನಾನು ಕುಡಿಯುವ ನೀರಿನಲ್ಲಿ ಏನಾದರೂ ಸ್ಪರ್ಧೆಯ ಸಂದರ್ಭ ಬೆರೆಸಿದರೆ?” ಎಂದು ಎಕ್ಸ್ ಪೋಸ್ಟ್ನಲ್ಲಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
“ನನ್ನನ್ನು ಡೋಪಿಂಗ್ನಲ್ಲಿ ಸಿಲುಕಿಸುವ ಸಂಚು ಇದೆ ಎಂದು ನಾನು ಹೇಳಿದರೆ ಅದು ತಪ್ಪಾಗಲಾರದು ಎಂದು ಹೇಳಿದ ಫೋಗಟ್, ತಮ್ಮ ಖಾಸಗಿ ಕೋಚ್ ಮತ್ತು ಫಿಸಿಯೋ ಅವರಿಗೆ ಎಪ್ರಿಲ್ 19ರಂದು ಆರಂಭಗೊಳ್ಳಲಿರುವ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಕ್ಕೆ ಮಾನ್ಯತೆ ನಿರಾಕರಿಸಲಾಗಿದೆ. ಕಳೆದೊಂದು ತಿಂಗಳಿನಿಂದ ಸರ್ಕಾರವನ್ನು ವಿನಂತಿಸುತ್ತಿದ್ದೇನೆ. ಮಾನ್ಯತೆಯಿಲ್ಲದೆ ಅವರಿಗೆ ನನ್ನೊಂದಿಗೆ ಸ್ಪರ್ಧೆಗೆ ಬರಲಾಗದು ಎಂದು ಫೋಗಟ್ ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಹೊರಿಸಿ ಪ್ರತಿಭಟಿಸಿದ ಮೂವರು ಪ್ರಮುಖ ಕುಸ್ತಿಪಟುಗಳಲ್ಲಿ ವಿನೇಶ್ ಫೋಗಟ್ ಕೂಡ ಒಬ್ಬರು.