ಬ್ರಿಸ್ಬೇನ್ ಇಂಟರ್ನ್ಯಾಶನಲ್ | ಜೊಕೊವಿಕ್-ಕಿರ್ಗಿಯೊಸ್ಗೆ ಜಯ
ಜೊಕೊವಿಕ್-ಕಿರ್ಗಿಯೊಸ್ | PC : X
ಬ್ರಿಸ್ಬೇನ್ : ಸರ್ಬಿಯದ 24 ಗ್ರ್ಯಾನ್ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್ರೊಂದಿಗೆ ಡಬಲ್ಸ್ ಪಂದ್ಯವನ್ನು ಆಡಿದ ನಿಕ್ ಕಿರ್ಗಿಯೊಸ್ ಅವರು ಬ್ರಿಸ್ಬೇನ್ ಇಂಟರ್ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಆಂಡ್ರಿಯಾಸ್ ಮೈಸ್ ಹಾಗೂ ಅಲೆಕ್ಸಾಂಡರ್ ಎರ್ಲರ್ರನ್ನು ಮಣಿಸಿದರು. ಈ ಗೆಲುವಿನ ಮೂಲಕ ಕಿರ್ಗಿಯೊಸ್ ವೃತ್ತಿಪರ ಟೆನಿಸ್ಗೆ ವಾಪಸಾದರು.
ವೈರ್ಲ್ಡ್ಕಾರ್ಡ್ ಪಡೆದಿರುವ ಜೊಕೊವಿಕ್ ಹಾಗೂ ಕಿರ್ಗಿಯೊಸ್ ಜೋಡಿ ಒಂದು ಗಂಟೆ, 48 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 6-4, 6-7(4), (10-8)ಅಂತರದಿಂದ ಜಯಶಾಲಿಯಾಯಿತು.
ಮೊಣಕಾಲು, ಕಾಲು ಹಾಗೂ ಮಣಿಕಟ್ಟು ಗಾಯದಿಂದಾಗಿ ಹಿಂದಿನ 2 ವರ್ಷಗಳಲ್ಲಿ ಕಿರ್ಗಿಯೊಸ್ ಅವರು ಕೇವಲ ಒಂದು ಸಿಂಗಲ್ಸ್ ಟೂರ್ ಪಂದ್ಯ ಆಡಿದ್ದಾರೆ.
ಜೊಕೊವಿಕ್ ಹಾಗೂ ಕಿರ್ಗಿಯೊಸ್ ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಕ್ರೊಯೇಶಿಯ-ಕಿವೀಸ್ ಜೋಡಿ ನಿಕೊಲಾ ಮೆಟ್ಕಿಕ್ ಹಾಗೂ ಮೈಕಲ್ ವೀನಸ್ರನ್ನು ಎದುರಿಸಲಿದ್ದಾರೆ.
ಜನವರಿ 12ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಟೆನಿಸ್ ಓಪನ್ಗೆ ಸಜ್ಜಾಗಲು ಜೊಕೊವಿಕ್ ಹಾಗೂ ಕಿರ್ಗಿಯೊಸ್ ಬ್ರಿಸ್ಬೇನ್ನಲ್ಲಿ ಸಿಂಗಲ್ಸ್ ಪಂದ್ಯ ಆಡಲಿದ್ದಾರೆ.