ನನ್ನನ್ನು ಬುಮ್ರಾ ಜೊತೆ ಹೋಲಿಸಬೇಡಿ: ಕಪಿಲ್ ದೇವ್
ಜಸ್ಪ್ರಿತ್ ಬುಮ್ರಾ, ಕಪಿಲ್ ದೇವ್ | PC : PTI
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರಿತ್ ಬುಮ್ರಾರ ಕೆಲಸದ ಒತ್ತಡದ ಕಳವಳಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ದಂತಕತೆ ಕಪಿಲ್ ದೇವ್, ವಿಭಿನ್ನ ಕಾಲಮಾನಗಳ ಆಟಗಾರರನ್ನು ಪರಸ್ಪರ ಹೋಲಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಸೋಮವಾರ ಹೇಳಿದ್ದಾರೆ.
ಪ್ರೊಫೆಶನಲ್ ಗಾಲ್ಫ್ ಟೂರ್ ಆಫ್ ಇಂಡಿಯಾದ ಪತ್ರಿಕಾಗೋಷ್ಠಿಯ ನೇಪಥ್ಯದಲ್ಲಿ ಮಾತನಾಡಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಆಧುನಿಕ ಕ್ರಿಕೆಟ್ ಮತ್ತು ತನ್ನ ಆಡುವ ದಿನಗಳ ನಡುವಿನ ಪ್ರಮುಖ ವ್ಯತ್ಯಾಸಗಳ ಬಗ್ಗೆ ಮಾತನಾಡಿದರು.
‘‘ದಯವಿಟ್ಟು ನನ್ನನ್ನು ಬುಮ್ರಾ ಜೊತೆ ಹೋಲಿಸಬೇಡಿ. ಒಂದು ತಲೆಮಾರಿನ ಆಟಗಾರರನ್ನು ಇನ್ನೊಂದು ತಲೆಮಾರಿನ ಆಟಗಾರರೊಂದಿಗೆ ತುಲನೆ ಮಾಡಲು ಸಾಧ್ಯವಿಲ್ಲ. ಇಂದಿನ ಹುಡುಗರು ಒಂದೇ ದಿನದಲ್ಲಿ 300 ರನ್ಗಳನ್ನು ಬಾರಿಸಬಲ್ಲರು. ನಮ್ಮ ಕಾಲದಲ್ಲಿ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ, ಹೋಲಿಕೆ ಮಾಡಬೇಡಿ’’ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೊಫೆಶನಲ್ ಗಾಲ್ಫ್ ಟೂರ್ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿರುವ ಕಪಿಲ್ ದೇವ್ ಹೇಳಿದರು.
ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ಆಸ್ಟ್ರೇಲಿಯ ಪ್ರವಾಸದಲ್ಲಿ ಬುಮ್ರಾ ಗಾಯಗೊಂಡಿದ್ದಾರೆ ಮತ್ತು ಭಾರತವು ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 1-3ರಿಂದ ಸೋತಿದೆ. ಆ ಬಳಿಕ, ಕೆಲಸದ ಒತ್ತಡವನ್ನು ನಿಭಾಯಿಸುವ ವಿಷಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ಕಪಿಲ್ ದೇವ್ರ ತಂಡದಲ್ಲಿ ಆಡಿದ್ದ ಹಾಗೂ 1983ರ ವಿಶ್ವಕಪ್ ವಿಜೇತ ಭಾರತೀಯ ತಂಡದ ಸದಸ್ಯರಾಗಿದ್ದ ಬಲ್ವಿಂದರ್ ಸಂಧು, ‘‘ಕೆಲಸದ ಒತ್ತಡ ಎನ್ನುವುದು ಆಸ್ಟ್ರೇಲಿಯನ್ನರ ಕಲ್ಪನೆ’’ ಎಂದು ಬಣ್ಣಿಸಿದ್ದರು.
‘‘ಬುಮ್ರಾ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ 9 ಇನಿಂಗ್ಸ್ಗಳಲ್ಲಿ 150 ಓವರ್ಗಳನ್ನು ಬೌಲ್ ಮಾಡಿದ್ದರು. ಅಂದರೆ ಒಂದು ಇನಿಂಗ್ಸ್ಗೆ 15 ಓವರ್ ಆಗುತ್ತದೆ. ಅದು ದೊಡ್ಡ ವಿಷಯವೇನೂ ಅಲ್ಲ’’ ಎಂದು ಅವರು ಹೇಳಿದ್ದರು.
‘‘ನಮ್ಮ ಕಾಲದಲ್ಲಿ, ನಾವು ಪ್ರತಿ ದಿನ 25-30 ಓವರ್ಗಳನ್ನು ಹಾಕುತ್ತಿದ್ದೆವು. ಕಪಿಲ್ ದೇವ್ ತನ್ನ ಕ್ರೀಡಾ ಬದುಕಿನುದ್ದಕ್ಕೂ ಸುದೀರ್ಘ ಕಂತುಗಳಲ್ಲಿ ಬೌಲಿಂಗ್ ಮಾಡುತ್ತಿದ್ದರು. ಹೆಚ್ಚು ಬೌಲಿಂಗ್ ಮಾಡಿದಂತೆಲ್ಲಾ ನಿಮ್ಮ ದೇಹ ಮತ್ತು ಸ್ನಾಯು ಬಲಿಷ್ಠಗೊಳ್ಳುತ್ತದೆ’’ಎಂದಿದ್ದರು.