ಮುಂಬೈ ಇಂಡಿಯನ್ಸ್ ನ ಮೊದಲ ಕೆಲವು ಪಂದ್ಯಗಳಿಗೆ ಬುಮ್ರಾ ಅಲಭ್ಯ: ವರದಿ
Photo Credit: THE HINDU
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಮಾ.22ರಿಂದ ಆರಂಭವಾಗಲಿರುವ ಐಪಿಎಲ್ ಟಿ-20 ಟೂರ್ನಿಯ ಮೊದಲೆರಡು ಪಂದ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ವರದಿಯಾಗಿದೆ.
ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ, ಮುಂಬೈ ತಂಡದ ಮೊದಲ ಮೂರು ಪಂದ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಎಪ್ರಿಲ್ನಲ್ಲಿ ಮುಂಬೈ ತಂಡವನ್ನು ಸೇರುವ ನಿರೀಕ್ಷೆ ಇದೆ. ಬುಮ್ರಾ ಇನ್ನೂ ಕೆಲವು ಪಂದ್ಯಗಳಲ್ಲಿ ಅಲಭ್ಯರಾಗಲಿದ್ದು, ಅವರು ಯಾವಾಗ ಫಿಟ್ ಆಗಲಿದ್ದಾರೆ ಎಂಬ ಬಗ್ಗೆ ಖಚಿತತೆ ಇಲ್ಲ.
31ರ ಹರೆಯದ ಬುಮ್ರಾ ಅವರು ಜನವರಿಯಲ್ಲಿ ಆಸ್ಟ್ರೇಲಿಯದಲ್ಲಿ ಕೊನೆಯ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಸಿಡ್ನಿಯಲ್ಲಿ ನಡೆದಿದ್ದ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಬುಮ್ರಾಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಆ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಬುಮ್ರಾ ಬೌಲಿಂಗ್ ಮಾಡಿರಲಿಲ್ಲ.
ಬುಮ್ರಾ ಇತ್ತೀಚೆಗೆ ಕೊನೆಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದರು. ದುಬೈನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಮಣಿಸಿದ್ದ ಭಾರತ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಬುಮ್ರಾ ಟೂರ್ನಿಯ ಆರಂಭಿಕ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಪಂದ್ಯಾವಳಿಯ ವೇಳೆಗೆ ಚೇತರಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.
ಬುಮ್ರಾ 2023ರ ಮಾರ್ಚ್ನಲ್ಲಿ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಒಳಗಾಗಿದ್ದರು. ಆ ವರ್ಷ ನಡೆದಿದ್ದ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. 2024ರ ಐಪಿಎಲ್ ಗೆ ವಾಪಸಾಗಿದ್ದ ಬುಮ್ರಾ ಮುಂಬೈ ಇಂಡಿಯನ್ಸ್ ಪರ 13 ಪಂದ್ಯಗಳಲ್ಲಿ ಭಾಗವಹಿಸಿ 20 ವಿಕೆಟ್ಗಳನ್ನು ಕಬಳಿಸಿದ್ದರು. 2024ರಲ್ಲಿ ಟೀಮ್ ಇಂಡಿಯಾವು ಚಾಂಪಿಯನ್ಪಟ್ಟಕ್ಕೇರುವಲ್ಲಿಯೂ ಪ್ರಧಾನ ಪಾತ್ರವಹಿಸಿದ್ದರು.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ 2025ರ ಆವೃತ್ತಿಯ ಐಪಿಎಲ್ ಅಭಿಯಾನವನ್ನು ಮಾ.23ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ಆರಂಭಿಸಲಿದೆ.