ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಬುಮ್ರಾ ನಾಮನಿರ್ದೇಶನ
ಜಸ್ಪ್ರಿತ್ ಬುಮ್ರಾ | PTI
ಹೊಸದಿಲ್ಲಿ : ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್ಪ್ರಿತ್ ಬುಮ್ರಾ, ಜೋ ರೂಟ್, ಹ್ಯಾರಿ ಬ್ರೂಕ್ ಹಾಗೂ ಕಮಿಂದು ಮೆಂಡಿಸ್ ನಾಮನಿರ್ದೇಶನಗೊಂಡಿದ್ದಾರೆ. ವರ್ಷದುದ್ದಕ್ಕೂ ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಕ್ರಿಕೆಟಿಗರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ.
ಭಾರತದ ಪ್ರಮುಖ ವೇಗದ ಬೌಲರ್ ಬುಮ್ರಾ ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ್ದಾರೆ. ಅವರು 13 ಪಂದ್ಯಗಳಲ್ಲಿ 14.92ರ ಸರಾಸರಿಯಲ್ಲಿ ಒಟ್ಟು 71 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಆಸ್ಟ್ರೇಲಿಯದ ವಿರುದ್ಧ ಕೇವಲ 4 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 30 ವಿಕೆಟ್ಗಳನ್ನು ಪಡೆದಿದ್ದಾರೆ. ಇದು ಉನ್ನತ ಮಟ್ಟದಲ್ಲಿ ಬುಮ್ರಾ ಅವರ ಸ್ಥಿರ ಪ್ರದರ್ಶನದ ಸಾಮರ್ಥ್ಯವನ್ನು ಬಿಂಬಿಸುತ್ತಿದೆ.
2023ರಲ್ಲಿ ಆಗಿರುವ ಗಾಯದಿಂದ ಚೇತರಿಸಿಕೊಂಡು ಟೆಸ್ಟ್ ಕ್ರಿಕೆಟಿಗೆ ಮರಳಿದ್ದ ಬುಮ್ರಾ ಅವರು 2024ರಲ್ಲಿ ಬೌಲಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ 13 ಟೆಸ್ಟ್ ಪಂದ್ಯಗಳಲ್ಲಿ ಆಡಿ 71 ವಿಕೆಟ್ಗಳನ್ನು ಪಡೆದು ಭಾರತದ ಪರ ಗರಿಷ್ಠ ವಿಕೆಟ್ಗಳನ್ನು ಪಡೆದಿದ್ದಾರೆ ಎಂದು ಐಸಿಸಿ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ವಿವಿಧ ವಾತಾವರಣಗಳಲ್ಲಿ ಬುಮ್ರಾ ಅವರ ಸ್ಥಿರ ಪ್ರದರ್ಶನ ಗಮನಾರ್ಹವಾಗಿದ್ದು, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯದ ವೇಗಿಗಳ ಸ್ನೇಹಿ ಪಿಚ್ನಲ್ಲಿ ಮಾತ್ರವಲ್ಲ ಭಾರತದ ವೇಗಿಗಳಿಗೆ ಸವಾಲಾಗುವ ಪಿಚ್ನಲ್ಲೂ ಮಿಂಚಿದ್ದಾರೆ.
ಬುಮ್ರಾ ಅವರ ಅಮೋಘ ಬೌಲಿಂಗ್ ನೆರವಿನಿಂದ ಭಾರತ ತಂಡವು ಪರ್ತ್ ಟೆಸ್ಟ್ನಲ್ಲಿ 295 ರನ್ ಅಂತರದಿಂದ ಗೆದ್ದಿತ್ತು. ಭಾರತದ ಯಶಸ್ಸಿನಲ್ಲಿ ಬುಮ್ರಾ ಅವರ ಕೊಡುಗೆ ಅಪಾರ.
ಇಂಗ್ಲೆಂಡ್ನ ಜೋ ರೂಟ್(17 ಪಂದ್ಯ, 1,556 ರನ್) ಹಾಗೂ ಹ್ಯಾರಿ ಬ್ರೂಕ್(12 ಪಂದ್ಯ,1,100 ರನ್)ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿದ್ದಾರೆ. ಶ್ರೀಲಂಕಾದ ಕಮಿಂದು ಮೆಂಡಿಸ್ ಈ ವರ್ಷ ಕೇವಲ 9 ಟೆಸ್ಟ್ ಪಂದ್ಯಗಳಲ್ಲಿ 74.92ರ ಸರಾಸರಿಯಲ್ಲಿ ಒಟ್ಟು 1,049 ರನ್ ಗಳಿಸಿದ್ದಾರೆ. ಮೆಂಡಿಸ್ ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 2 ಶತಕಗಳನ್ನು ಗಳಿಸಿದ್ದರು.