ಬಿಡಬ್ಲ್ಯುಎಫ್ ಉದ್ದೀಪನ ದ್ರವ್ಯ ವಿರೋಧಿ ನಿಯಮ ಉಲ್ಲಂಘನೆ | ಟೋಕಿಯೊ ಚಾಂಪಿಯನ್ ಪ್ರಮೋದ್ ಭಗತ್ 18 ತಿಂಗಳು ಅಮಾನತು
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಿಂದ ಹೊರಕ್ಕೆ
ಪ್ರಮೋದ್ ಭಗತ್ | PC : PTI
ಹೊಸದಿಲ್ಲಿ : ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ಸ್ ನ(ಬಿಡಬ್ಲ್ಯುಎಫ್) ಉದ್ದೀಪನ ದ್ರವ್ಯ ವಿರೋಧಿ ನಿಯಮಗಳನ್ನು ಉಲ್ಲಂಘಿಸಿರುವ ತಪ್ಪಿಗೆ ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಆಗಿರುವ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಪಟು ಪ್ರಮೋದ್ ಭಗತ್ರನ್ನು 18 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿದೆ.
ಅಮಾನತು ತಕ್ಷಣವೇ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಭಗತ್ ಮುಂಬರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸುವುದರಿಂದ ವಂಚಿತರಾಗಿದ್ದಾರೆ. ಇದು ಭಾರತದ ಪದಕದ ಆಕಾಂಕ್ಷೆಗೆ ತೀವ್ರ ಹಿನ್ನಡೆಯಾಗಿದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಗತ್ ಭಾಗವಹಿಸುವುದಕ್ಕೆ ಅನರ್ಹರಾಗಿದ್ದಾರೆ ಎಂದು ಬಿಡಬ್ಲ್ಯುಎಫ್ ಮಂಗಳವಾರ ಬೆಳಗ್ಗೆ ನೀಡಿರುವ ಪ್ರಕಟನೆಯೊಂದರಲ್ಲಿ ಖಚಿತಪಡಿಸಿದೆ.
ಉದ್ದೀಪನ ದ್ರವ್ಯ ವಿರೋಧಿ ನಿಯಮಗಳಲ್ಲಿ ಕ್ರೀಡಾಪಟು ಎಲ್ಲಿದ್ದಾರೆಂದು ಮಾಹಿತಿ ನೀಡುವುದು ನಿರ್ಣಾಯಕ ಅಂಶವಾಗಿರುತ್ತದೆ. ಸ್ಪರ್ಧಾವಳಿಯಿಂದ ಹೊರಗೆ ನಡೆಯುವ ಪರೀಕ್ಷೆಯ ವೇಳೆ ಕ್ರೀಡಾಪಟುಗಳು ತಾವಿರುವ ಸ್ಥಳದ ಕುರಿತು ವಿವರವಾದ ಮಾಹಿತಿ ನೀಡುವ ಅಗತ್ಯವಿದೆ. ಈ ನಿಯಮವನ್ನು ಪಾಲಿಸುವಲ್ಲಿ ವಿಫಲವಾದರೆ ಅಮಾನತು ಶಿಕ್ಷೆ ಎದುರಿಸಬೇಕಾಗಿದೆ. ಭಗತ್ ವಿಚಾರದಲ್ಲೂ ಈ ರೀತಿ ಆಗಿದ್ದನ್ನು ಕಾಣಬಹುದು.
12 ತಿಂಗಳುಗಳಲ್ಲಿ ಭಗತ್ ಮೂರು ಬಾರಿ ತಾನೆಲ್ಲಿದ್ದೇನೆ ಎಂಬ ಕುರಿತು ಮಾಹಿತಿ ನೀಡದೆ ಬಿಡಬ್ಲ್ಯುಎಫ್ನ ಉದ್ದೀಪನ ಮದ್ದು ವಿರೋಧಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕ್ರೀಡಾ ನ್ಯಾಯಮಂಡಳಿಯ(ಸಿಎಎಸ್) ಉದ್ದೀಪನ ದ್ರವ್ಯ ವಿರೋಧಿ ವಿಭಾಗ ಮಾರ್ಚ್ 1, 2024ರಂದು ಪತ್ತೆ ಹಚ್ಚಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಎಸ್ ಎಲ್ 3 ಅಥ್ಲೀಟ್ ಭಗತ್, ಸಿಎಎಸ್ ಮೇಲ್ಮನವಿ ವಿಭಾಗಕ್ಕೆ ಈ ನಿರ್ಧಾರದ ವಿರುದ್ಧ ಮನವಿ ಸಲ್ಲಿಸಿದ್ದರು. 2024ರ ಜುಲೈ 29ರಂದು ಸಿಎಎಸ್ ಮೇಲ್ಮನವಿ ವಿಭಾಗವು ಭಗತ್ ಅವರ ಮನವಿಯನ್ನು ತಿರಸ್ಕರಿಸಿತ್ತು. ಸಿಎಎಸ್ ಉದ್ದೀಪನ ದ್ರವ್ಯ ವಿರೋಧಿ ವಿಭಾಗದ ನಿರ್ಧಾರವನ್ನು ಮಾ.1,2024ರಂದು ದೃಢಪಡಿಸಿತ್ತು. ಪ್ರಮೋದ್ ಭಗತ್ ಅವರ ಅಮಾನತು ಅವಧಿಯು ಸೆಪ್ಟಂಬರ್ 1, 2025ರ ತನಕ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಇದೊಂದು ತೀವ್ರ ಬೇಸರ ಹಾಗೂ ದುರದೃಷ್ಟಕರ ಸಂಗತಿ. ಪ್ಯಾರಾಲಿಂಪಿಕ್ಸ್ನಲ್ಲಿ ಭಗತ್ ಪದಕ ಗೆಲ್ಲಬಲ್ಲ ನೆಚ್ಚಿನ ಕ್ರೀಡಾಪಟುವಾಗಿದ್ದರು. ಅವರೊಬ್ಬ ಹೋರಾಟಗಾರ ಹಾಗೂ ಅವರು ಮತ್ತಷ್ಟು ಬಲಿಷ್ಠರಾಗಿ ಮರಳುತ್ತಾರೆಂಬ ವಿಶ್ವಾಸ ನನಗಿದೆ ಎಂದು ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ ನ ಮುಖ್ಯ ಕೋಚ್ ಗೌರವ್ ಖನ್ನಾ ಪಿಟಿಐಗೆ ತಿಳಿಸಿದ್ದಾರೆ.
ಪ್ರಮೋದ್ ಭಗತ್ ಭಾರತೀಯ ಪ್ಯಾರಾ ಕ್ರೀಡೆಗಳು ಅದರಲ್ಲೂ ಮುಖ್ಯವಾಗಿ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಪ್ರಮುಖರಾಗಿದ್ದಾರೆ. ತನ್ನ ಸಾಧನೆಗಳ ಮೂಲಕ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಟೋಕಿಯೊ 2020ರ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಸಿಂಗಲ್ಸ್ ಎಸ್ ಎಲ್ 3 ವಿಭಾಗದಲ್ಲಿ ಚಿನ್ನದ ಪದಕ ಸಹಿತ ವೃತ್ತಿಬದುಕಿನಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ತಲುಪಿದ್ದಾರೆ.
ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಆಗಿದ್ದಲ್ಲದೆ, ವಿಶ್ವ ಚಾಂಪಿಯನ್ಶಿಪ್ ಗಳು ಹಾಗೂ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಹಲವು ಚಿನ್ನದ ಪದಕಗಳನ್ನು ಜಯಿಸಿದ್ದರು. ಜಾಗತಿಕವಾಗಿ ಪ್ಯಾರಾ-ಬ್ಯಾಡ್ಮಿಂಟನ್ ನಲ್ಲಿ ಭಾರತದ ಪ್ರದರ್ಶನದಲ್ಲಿ ಭಗತ್ ಅವರ ಕೊಡುಗೆ ಅಪಾರವಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಥಾಯ್ಲೆಂಡ್ನ ಪಟ್ಟಾಯದಲ್ಲಿ ಐದನೇ ಬಾರಿ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಜಯಿಸಿದ 36ರ ಹರೆಯದ ಭಗತ್ ಚೀನಾದ ದಂತಕತೆ ಲಿನ್ ಡಾನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.