ಬಿಡಬ್ಲ್ಯುಎಫ್ ರ್ಯಾಂಕಿಂಗ್: ಎಚ್.ಎಸ್.ಪ್ರಣಯ್ ಜೀವನಶ್ರೇಷ್ಠ ಸಾಧನೆ
Photo: twitter/SportsgramIndia
ಹೊಸದಿಲ್ಲಿ, ಆ.29: ಭಾರತದ ಶಟ್ಲರ್ ಎಚ್.ಎಸ್.ಪ್ರಣಯ್ ಹೊಸ ಬಿಡಬ್ಲ್ಯುಎಫ್ ರ್ಯಾಂಕಿಂಗ್ ನಲ್ಲಿ 6ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ವಿಶ್ವ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಹಿನ್ನೆಲೆಯಲ್ಲಿ ಪ್ರಣಯ್ ರ್ಯಾಂಕಿಂಗ್ ನಲ್ಲಿ 3 ಸ್ಥಾನ ಮೇಲಕ್ಕೇರಿ 72437 ಪಾಯಿಂಟ್ಸ್ ಗಳಿಸಿದ್ದಾರೆ.
ಪ್ರಣಯ್ ಕಳೆದ ಡಿಸೆಂಬರ್ ನಿಂದ ಅಗ್ರ-10 ರ್ಯಾಂಕಿಂಗ್ ಉಳಿಸಿಕೊಂಡಿರುವ ಭಾರತದ ಏಕೈಕ ಶಟ್ಲರ್ ಆಗಿದ್ದಾರೆ. ಪ್ರಣಯ್ ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದು, ಈ ಅವಧಿಯಲ್ಲಿ ಸೂಪರ್-500 ಮಲೇಶ್ಯ ಮಾಸ್ಟರ್ಸ್ ಪ್ರಶಸ್ತಿಯನ್ನೂ ಜಯಿಸಿದ್ದಾರೆ.
ಪುರುಷರ ಸಿಂಗಲ್ ನಲ್ಲಿ ಲಕ್ಷ್ಯ ಸೇನ್ ಒಂದು ರ್ಯಾಂಕ್ ಕೆಳ ಜಾರಿ 12ನೇ ಸ್ಥಾನದಲ್ಲಿದ್ದಾರೆ. ಕೆ.ಶ್ರೀಕಾಂತ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದರೂ 20ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ಆಟಗಾರ್ತಿ ಪಿ.ವಿ. ಸಿಂಧು ಒಂದು ಸ್ಥಾನ ಮೇಲಕ್ಕೇರಿ 14ನೇ ಸ್ಥಾನ ತಲುಪಿದ್ದಾರೆ.
ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ನಿರ್ಗಮಿಸಿದ್ದರೂ ಕೂಡ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.