ಬಿಡಬ್ಲ್ಯುಎಫ್ ರ್ಯಾಂಕಿಂಗ್: 3 ಸ್ಥಾನ ಕೆಳ ಜಾರಿದ ಸಿಂಧು
Photo: PTI
ಹೊಸದಿಲ್ಲಿ: ಭಾರತದ ಶಟ್ಲರ್ ಪಿ.ವಿ. ಸಿಂಧು ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯುಎಫ್ ವಿಶ್ವ ರ್ಯಾಂಕಿಂಗ್ನ ಮಹಿಳೆಯರ ಸಿಂಗಲ್ಸ್ನಲ್ಲಿ ಮೂರು ಸ್ಥಾನ ಕೆಳ ಜಾರಿ 15ನೇ ಸ್ಥಾನ ತಲುಪಿದ್ದಾರೆ.
ಒಲಿಂಪಿಕ್ಸ್ನಲ್ಲಿ ಎರಡು ಬಾರಿ ಪದಕಗಳನ್ನು ಜಯಿಸಿರುವ ಸಿಂಧು ಪ್ರಸ್ತುತ 13 ಟೂರ್ನಮೆಂಟ್ಗಳಲ್ಲಿ 51,070 ಅಂಕ ಗಳಿಸಿದ್ದಾರೆ.
ಈ ವರ್ಷಾರಂಭದಲ್ಲಿ ಸಿಂಧು ಅಗ್ರ-10ರಿಂದ ಹೊರಗುಳಿದಿದ್ದರು. ಕಳೆದ ವರ್ಷ ಆಗಸ್ಟ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ ನಂತರ ಪಾದದ ನೋವಿಗೆ ಒಳಗಾಗಿದ್ದ ಸಿಂಧು ಗಾಯದಿಂದ ಚೇತರಿಸಿಕೊಂಡು 5 ತಿಂಗಳ ಬಳಿಕ ವಾಪಸ್ ಆದ ನಂತರ ಈ ವರ್ಷ ಅವರ ಪ್ರದರ್ಶನ ಕಳಪೆ ಮಟ್ಟಕ್ಕಿಳಿದಿದೆ.
ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಸೂಪರ್-300ನಲ್ಲಿ ಫೈನಲ್ ಹಾಗೂ ಮಲೇಶ್ಯ ಮಾಸ್ಟರ್ಸ್ ಸೂಪರ್-500ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದು ಈ ಋತುವಿನಲ್ಲಿ ಸಿಂಧು ಅವರ ಪ್ರಮುಖ ಸಾಧನೆಯಾಗಿದೆ. ವರ್ಷದ ಆರಂಭದಿಂದಲೇ ಇತರ ಹಲವು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.
ಪುರುಷರ ಡಬಲ್ಸ್ ಆಟಗಾರರಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ವಿಶ್ವ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನಕ್ಕೇರಿದ್ದು, ಈ ಇಬ್ಬರು ಅಗ್ರ ರ್ಯಾಂಕಿನಲ್ಲಿರುವ ಭಾರತದ ಆಟಗಾರರಾಗಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್.ಪ್ರಣಯ್ ಭಾರತದ ಅಗ್ರ ರ್ಯಾಂಕಿನ ಆಟಗಾರರಾಗಿದ್ದು, ಪ್ರಸ್ತುತ 8ನೇ ಸ್ಥಾನದಲ್ಲಿದ್ದಾರೆ. ಲಕ್ಷ್ಯ ಸೇನ್ ಹಾಗೂ ಕಿಡಂಬಿ ಶ್ರೀಕಾಂತ್ ಕ್ರಮವಾಗಿ 19ನೇ ಹಾಗೂ 20ನೇ ರ್ಯಾಂಕಿನಲ್ಲಿದ್ದಾರೆ.
ಮಹಿಳೆಯರ ಡಬಲ್ಸ್ನಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಒಂದು ಸ್ಥಾನ ಕೆಳ ಜಾರಿದ್ದು, ಪ್ರಸ್ತುತ 17ನೇ ಸ್ಥಾನದಲ್ಲಿದ್ದಾರೆ. ಪುರುಷರ ಡಬಲ್ಸ್ ಜೋಡಿ ಎಂ.ಆರ್.ಅರ್ಜುನ್ ಹಾಗೂ ಧ್ರುವ್ ಕಪಿಲಾ 26ನೇ ಸ್ಥಾನದಲ್ಲಿದ್ದಾರೆ.ರೋಹಿತ್ ಕಪೂರ್ ಹಾಗೂ ಎನ್.ಸಿಕ್ಕಿ ರೆಡ್ಡಿ 33ನೇ ಸ್ಥಾನದಲ್ಲಿದ್ದಾರೆ.