ಬಿಡಬ್ಲ್ಯುಎಫ್ ರ್ಯಾಂಕಿಂಗ್: ಜೀವನಶ್ರೇಷ್ಠ ಸಾಧನೆ ಮಾಡಿದ ಸಾತ್ವಿಕ್, ಚಿರಾಗ್
ಹೊಸದಿಲ್ಲಿ: ಇತ್ತೀಚೆಗೆ ಕೊರಿಯಾ ಓಪನ್ ಪ್ರಶಸ್ತಿ ಜಯಿಸಿರುವ ಭಾರತದ ಅಗ್ರಮಾನ್ಯ ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯುಎಫ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಕಳೆದ ವಾರ ಕೊರಿಯಾ ಓಪನ್ ಸೆಮಿ ಫೈನಲ್ನಲ್ಲಿ ಚೀನಾದ ಜೋಡಿ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ರನ್ನು ಸೋಲಿಸಿದ ಸಾತ್ವಿಕ್ ಹಾಗೂ ಚಿರಾಗ್ ದ್ವಿತೀಯ ಸ್ಥಾನಕ್ಕೇರಿದರು.
ಹಾಲಿ ಏಶ್ಯನ್ ಚಾಂಪಿಯನ್ಗಳಾದ ಸಾತ್ವಿಕ್ ಹಾಗೂ ಚಿರಾಗ್ ಕೊರಿಯಾ ಓಪನ್(ಸೂಪರ್-500), ಸ್ವಿಸ್ ಓಪನ್(ಸೂಪರ್-300) ಹಾಗೂ ಇಂಡೋನೇಶ್ಯ ಓಪನ್(ಸೂಪರ್-1000)ಪ್ರಶಸ್ತಿಗಳನ್ನು ಈ ಋತುವಿನಲ್ಲಿ ಜಯಿಸಿದ್ದು, ಇದೀಗ 87,211 ಅಂಕ ಗಳಿಸಿದ್ದಾರೆ.
ಈ ವರ್ಷ ನಾಲ್ಕನೇ ಫೈನಲ್ ಪಂದ್ಯವನ್ನಾಡಿದ ಸಾತ್ವಿಕ್ ಹಾಗೂ ಚಿರಾಗ್ ಕಳೆದ ವಾರ ಕೊರಿಯಾ ಓಪನ್ ಫೈನಲ್ನಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ವಿಶ್ವದ ನಂ.1 ಜೋಡಿ ಫಜರ್ ಅಲ್ಫಿಯಾನ್ ಹಾಗೂ ಮುಹಮ್ಮದ್ ರಿಯಾನ್ ಅಡ್ರಿಯಾಂಟೊರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.
ಸಾತ್ವಿಕ್ ಹಾಗೂ ಚಿರಾಗ್ ಈ ವರ್ಷ ಒಂದೇ ಒಂದು ಫೈನಲ್ ಪಂದ್ಯವನ್ನು ಸೋತಿಲ್ಲ. ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ನಲ್ಲಿ 10 ಪಂದ್ಯಗಳಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದ್ದಾರೆ.
ಇದೇ ವೇಳೆ ಎರಡು ಬಾರಿಯ ಒಲಿಂಪಿಯನ್, ಕೊರಿಯಾ ಓಪನ್ನಲ್ಲಿ ಬೇಗನೆ ನಿರ್ಗಮಿಸಿರುವ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ 17ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ 37ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಎಚ್.ಎಸ್.ಪ್ರಣಯ್ ಭಾರತದ ಅಗ್ರ ರ್ಯಾಂಕಿನ ಆಟಗಾರನಾಗಿ ಮುಂದುವರಿದಿದ್ದು ಪುರುಷರ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ಮೊದಲ ರ್ಯಾಂಕ್ನಲ್ಲಿದ್ದಾರೆ.
ಕೆನಡಾ ಓಪನ್ ವಿನ್ನರ್ ಲಕ್ಷ್ಯ ಸೇನ್ ಕೊರಿಯಾ ಓಪನ್ನಿಂದ ಹೊರಗುಳಿದ ಕಾರಣ 13ನೇ ಸ್ಥಾನಕ್ಕೆ ಜಾರಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಕಿಡಂಬಿ ಶ್ರೀಕಾಂತ್ 20ನೇ ರ್ಯಾಂಕಿನಲ್ಲಿದ್ದಾರೆ.