ಗಾಝಾದಲ್ಲಿ ಪ್ರತಿ ದಿನ ಮಕ್ಕಳು ಸಾಯುತ್ತಿರುವುದನ್ನು ನೋಡಲು ಸಾಧ್ಯವಿಲ್ಲ: ಕಣ್ಣೀರಿಟ್ಟ ಟೆನಿಸ್ ತಾರೆ ಅನಸ್ ಜಾಬಿರ್
ಫೆಲೆಸ್ತೀನಿಯರ ನೆರವಿಗೆ ಬಹುಮಾನ ಮೊತ್ತದಿಂದ ದೇಣಿಗೆ
ಅನಸ್ ಜಾಬಿರ್(X/parthpunter)
ಕಾಂಕುನ್: ತಾನು ಡಬ್ಲ್ಯುಟಿಎ ಫೈನಲ್ಸ್ಗಳಲ್ಲಿ ಗೆದ್ದಿರುವ ಬಹುಮಾನ ಮೊತ್ತದ ಒಂದು ಭಾಗವನ್ನು ಫೆಲೆಸ್ತೀನೀಯರಿಗೆ ನೀಡುವುದಾಗಿ ಟ್ಯುನೀಶಿಯದ ಟೆನಿಸ್ ತಾರೆ ಅನಸ್ ಜಾಬಿರ್ ಘೋಷಿಸಿದ್ದಾರೆ.
ಮೆಕ್ಸಿಕೊದ ಕಾಂಕುನ್ನಲ್ಲಿ ನಡೆಯುತ್ತಿರುವ 2023 ಡಬ್ಲ್ಯುಟಿಎ ಫೈನಲ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಬುಧವಾರ ಮರ್ಕೆಟ ವೊಂಡ್ರೂಸೋವರನ್ನು ಸೋಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಘೋಷಣೆ ಮಾಡಿದ್ದಾರೆ.
‘‘ಈ ಪಂದ್ಯದಲ್ಲಿ ಗೆದ್ದಿರುವ ಬಗ್ಗೆ ನನಗೆ ಸಂತೋಷವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾನು ಸಂತೋಷವಾಗಿಲ್ಲ’’ ಗ್ರ್ಯಾನ್ ಸ್ಲಾಮ್ ಒಂದರ ಫೈನಲ್ ತಲುಪಿರುವ ಏಕೈಕ ಅರಬ್ ಮಹಿಳೆ ಹೇಳಿದರು.
‘‘ಜಗತ್ತಿನ ಪರಿಸ್ಥಿತಿಯನ್ನು ನೋಡಿ ನನಗೆ ಸಂತೋಷವಾಗುತ್ತಿಲ್ಲ’’ ಎಂದು ಭಾವವೇಶದಿಂದ ಕಣ್ಣೀರು ಹಾಕುತ್ತಾ ಅವರು ಹೇಳಿದರು.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದ ಬಗ್ಗೆ ಮಾತನಾಡಿದ ಅವರು, ‘‘ಪ್ರತಿ ದಿನ ಮಕ್ಕಳು ಮತ್ತು ಶಿಶುಗಳು ಸಾಯುತ್ತಿರುವುದನ್ನು ನೋಡಲು ಸಾಧ್ಯವಿಲ್ಲ. ಇದು ಹೃದಯವಿದ್ರಾವಕ ಪರಿಸ್ಥಿತಿಯಾಗಿದೆ. ಫೆಲೆಸ್ತೀನೀಯರ ನೆರವಿಗಾಗಿ ನನ್ನ ಪ್ರಶಸ್ತಿ ಮೊತ್ತದ ಒಂದು ಭಾಗವನ್ನು ನೀಡಲು ನಿರ್ಧರಿಸಿದ್ದೇನೆ’’ ಎಂದು ಅನಸ್ ಜಾಬಿರ್ ಹೇಳಿದರು.
‘‘ಹೊರಗೆ ಭೀಕರ ಕೃತ್ಯಗಳು ನಡೆಯುತ್ತಿರುವಾಗ ಈ ವಿಜಯದಿಂದ ನಾನು ಸಂತೋಷ ಪಡಲು ಸಾಧ್ಯವಿಲ್ಲ. ನನ್ನನ್ನು ಕ್ಷಮಿಸಿ. ಪ್ರತಿ ದಿನ ವೀಡಿಯೊಗಳನ್ನು ನೋಡುವಾಗ ಕಣ್ಣೀರು ಬರುತ್ತದೆ’’ ಎಂದು ಅವರು ಹೇಳಿದರು.