ಮಯಾಂಕ್ ಯಾದವ್ ವಿಜೇತ ಟ್ರೋಫಿ ಹಸ್ತಾಂತರಿಸಿದ ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್
Photo : BCCI
ಹೊಸದಿಲ್ಲಿ : ಅದಾಗಲೇ ಸರಣಿಯನ್ನು ವಶಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರು ಬಾಂಗ್ಲಾದೇಶ ವಿರುದ್ಧ ಶನಿವಾರ ಹೈದರಾಬಾದ್ ನಲ್ಲಿ ನಡೆದ ಮೂರನೇ ಟಿ-20 ಪಂದ್ಯಕ್ಕೆ ಅರ್ಷದೀಪ್ ಸಿಂಗ್ ಗೆ ವಿಶ್ರಾಂತಿ ನೀಡಿ ಮಯಾಂಕ್ ಯಾದವ್ ರನ್ನು ಪ್ರಮುಖ ಬೌಲರ್ ಆಗಿ ಕಣಕ್ಕಿಳಿಸಿದರು. ಯುವ ಹಾಗೂ ಪ್ರತಿಭಾವಂತ ಬೌಲರ್ ಮಯಾಂಂಕ್ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟನ್ನು ಉರುಳಿಸಿ ತನ್ನ ನಾಯಕನ ನಂಬಿಕೆಯನ್ನು ಉಳಿಸಿಕೊಂಡರು.
ಬಿರುಸಿನ ಬೌನ್ಸರ್ ಎಸೆದ ಮಯಾಂಕ್ ಅವರು ಪರ್ವೇಝ್ ಹುಸೈನ್ ವಿಕೆಟನ್ನು ಉರುಳಿಸಿದರು. ಹುಸೈನ್ ಎದೆ ಎತ್ತರದ ಎಸೆತವನ್ನು ಎದುರಿಸಲು ಪರದಾಟ ನಡೆಸಿದರು. ಚೆಂಡು ಬ್ಯಾಟ್ ಹಾಗೂ ಗ್ಲೌವ್ ಅನ್ನು ಸವರಿ ರಿಯಾನ್ ಪರಾಗ್ ಬೊಗಸೆ ಸೇರಿತು.
ಇನಿಂಗ್ಸ್ ನಲ್ಲಿ ತಾನೆಸೆದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮಯಾಂಕ್ ಅವರು ಭಾರತೀಯ ಬೌಲರ್ ಗಳ ಎಲೈಟ್ ಗುಂಪಿಗೆ ಸೇರಿದರು. ಭುವನೇಶ್ವರ ಕುಮಾರ್, ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ನಂತರ ಈ ಸಾಧನೆ ಮಾಡಿದ ಭಾರತದ 4ನೇ ಬೌಲರ್ ಎನಿಸಿಕೊಂಡರು.
ಮಯಾಂಕ್ ಅವರು ಬಾಂಗ್ಲಾದೇಶದ ಪರ ಕೊನೆಯ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದ ಮಹ್ಮೂದುಲ್ಲಾ ವಿಕೆಟನ್ನು ಪಡೆದರು. ಅಂತಿಮವಾಗಿ ತನ್ನ 4 ಓವರ್ ಗಳ ಸ್ಪೆಲ್ನಲ್ಲಿ 32 ರನ್ ನೀಡಿ 2 ವಿಕೆಟ್ ಪಡೆದರು.
ತನ್ನ ಚೊಚ್ಚಲ ಸರಣಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ಮಯಾಂಕ್ ಅವರು ಒಟ್ಟು 4 ವಿಕೆಟ್ ಗಳನ್ನು ಪಡೆದರು. ಪ್ರತಿ ಗೇಮ್ ನಲ್ಲಿ ಕನಿಷ್ಠ ಒಂದು ವಿಕೆಟನ್ನು ಪಡೆದು ಉತ್ತಮ ಇಕಾನಮಿ ರೇಟ್ ಕಾಯ್ದುಕೊಂಡರು.
ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ ನಂತರ ಆಟಗಾರರು ವಿಜೇತ ಟ್ರೋಫಿಯೊಂದಿಗೆ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭ ಮಯಾಂಕ್ ಹಾಗೂ ನಿತಿಶ್ ರೆಡ್ಡಿ ಬಳಿ ತೆರಳಿದ ನಾಯಕ ಸೂರ್ಯಕುಮಾರ್ ಟ್ರೋಫಿಯನ್ನು ಹಸ್ತಾಂತರಿಸಿದರು.
ಸೂರ್ಯಕುಮಾರ್ ಅವರು ಮಯಾಂಕ್ ಗೆ ಟ್ರೋಫಿಯನ್ನು ಹಸ್ತಾಂತರಿಸುತ್ತಿರುವ ಘೋಟೊವನ್ನು ಹಂಚಿಕೊಂಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ್, ಯುವ ಬೌಲರ್ ನ ಅತ್ಯುತ್ತಮ ಪ್ರದರ್ಶನ ಹಾಗೂ ತಂಡದ ಯಶಸ್ಸನ್ನು ಎತ್ತಿ ತೋರಿಸುವ ವಿಶೇಷ ಸಂದೇಶವನ್ನು ನೀಡಿದರು.
ಭಾರತವು ನವೆಂಬರ್ 8ರಿಂದ ಟಿ20 ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳಲಿರುವ ಭಾರತವು 4 ಪಂದ್ಯಗಳ ಸರಣಿಯನ್ನು ಆಡಲಿದೆ.