ಮೊದಲ ಟೆಸ್ಟ್ ನಲ್ಲೇ ಶತಕ; ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸಾಧನೆ
ಹೊಸದಿಲ್ಲಿ: ವಯಸ್ಸಿಗೆ ಮೀರಿದ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿದ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧಿಸಿದ ಭಾರತದ ಮೂರನೇ ಆರಂಭಿಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೊಮಿನಿಕಾದಲ್ಲಿ ಅತಿಥೇಯ ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನ ಜೈಸ್ವಾಲ್ ಈ ಸಾಧನೆ ಮಾಡಿದರು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಮೀಸಲು ಆಟಗಾರನಾಗಿ ಪಾಲ್ಗೊಂಡಿದ್ದ ಜೈಸ್ವಾಲ್ ಅಲಿಕ್ ಅಥನಾಝ್ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ಚೊಚ್ಚಲ ಶತಕ ದಾಖಲಿಸಿದರು. ಹೆಲ್ಮೆಟ್ ತೆಗೆದು ಕೈಗಳನ್ನು ಮೇಲೆತ್ತಿ ತಮ್ಮ ಚೊಚ್ಚಲ ಶತಕವನ್ನು ಯಶಸ್ವಿ ಸಂಭ್ರಮಿಸಿದರು. ನಾಯಕ ರೋಹಿತ್ ಶರ್ಮಾ ಯುವ ಆಟಗಾರ ಯಶಸ್ವಿಯ ನ್ನು ಆತ್ಮೀಯವಾಗಿ ಆಲಂಗಿಸಿಕೊಂಡರು.
ಯಶಸ್ವಿ ಅವರು ವೆಸ್ಟ್ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ನಲ್ಲೇ ಶತಕ ಸಾಧಿಸಿದ ಮೂರನೇ ಬ್ಯಾಟ್ಸ್ ಮನ್ ಎನಿಸಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ (177-ಕೊಲ್ಕತ್ತಾ, 2013) ಮತ್ತು ಪೃಥ್ವಿ ಶಾ (134-ರಾಜಕೋಟ್ 2018) ಈ ಸಾಧನೆ ಮಾಡಿದ್ದರು. ಅಂತೆಯೇ ಆರಂಭಿಕನಾಗಿ ಆಗಮಿಸಿ ಮೊದಲ ಟೆಸ್ಟ್ ನಲ್ಲೇ ಶತಕ ಸಾಧಿಸಿದ ಮೂರನೇ ಬ್ಯಾಟ್ಸ್ ಮನ್ ಕೂಡಾ ಇವರಾಗಿದ್ದಾರೆ. ಇದಕ್ಕೂ ಮುನ್ನ ಶಿಖರ್ ಧವನ್ (187-ಆಸ್ಟ್ರೇಲಿಯಾ ವಿರುದ್ಧ- ಮೊಹಾಲಿ- 2013) ಮತ್ತು ಪೃಥ್ವಿ ಶಾ (134-ವೆಸ್ಟ್ಇಂಡೀಸ್ ವಿರುದ್ಧ, ರಾಜಕೋಟ್, 2018) ಈ ಸಾಧನೆ ಮಾಡಿದ್ದರು.
ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್ ನಲ್ಲೇ ಶತಕ ಸಾಧಿಸಿದ ಏಳನೇ ಭಾರತೀಯ ಆಟಗಾರನಾಗಿರುವ ಯಶಸ್ವಿ ಜೈಸ್ವಾಲ್, 13 ವರ್ಷಗಳ ಬಳಿಕ ಭಾರತೀಯನಿಂದ ಈ ಸಾಧನೆ ಹೊರಹೊಮ್ಮಲು ಕಾರಣರಾದರು. 2010ರಲ್ಲಿ ಸುರೇಶ್ ರೈನಾ ಶ್ರೀಲಂಕಾ ವಿರುದ್ಧ 120 ರನ್ ಸಿಡಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.