ಚಾಂಪಿಯನ್ಸ್ ಟ್ರೋಫಿ-2025 | ಭಾರತದ ಪಂದ್ಯಗಳಿಗೆ ಯುಎಇ ತಟಸ್ಥ ತಾಣ: ಖಚಿತಪಡಿಸಿದ ಪಿಸಿಬಿ
PC : @ICC
ಕರಾಚಿ: ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪಂದ್ಯಗಳ ಆತಿಥ್ಯವಹಿಸಲು ಯುಎಇ ಅನ್ನು ತಟಸ್ಥ ತಾಣವನ್ನಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಆಯ್ಕೆ ಮಾಡಿದೆ.
ಭದ್ರತೆಯ ಕುರಿತು ಕಳವಳ ವ್ಯಕ್ತಪಡಿಸಿದ್ದ ಭಾರತ ಕ್ರಿಕೆಟ್ ತಂಡವು 8 ತಂಡಗಳು ಭಾಗವಹಿಸುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು.
ಹೈಬ್ರಿಡ್ ಮಾದರಿಯ ಪ್ರಕಾರ ಭಾರತದ ಎಲ್ಲ ಪಂದ್ಯಗಳು ತಟಸ್ಥ ತಾಣದಲ್ಲಿ ನಡೆಯಲಿದೆ. ಭಾರತ ಸೆಮಿ ಫೈನಲ್ ಇಲ್ಲವೇ ಫೈನಲ್ ತಲುಪಿದರೂ ಆ ಪಂದ್ಯಗಳು ಪಾಕಿಸ್ತಾನದಿಂದ ಹೊರಗೆ ನಡೆಯಲಿದೆ ಎಂದು ಗುರುವಾರ ಐಸಿಸಿ ದೃಢಪಡಿಸಿತ್ತು.
ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಹಯಾನ್ ಮುಬಾರಕ್ ಅಲ್ ನಹಯಾನ್ರನ್ನು ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಭೇಟಿಯಾದ ನಂತರ ಯುಎಇ ಅನ್ನು ತಟಸ್ಥ ತಾಣವಾಗಿ ಆಯ್ಕೆ ಮಾಡಲಾಗಿದೆ ಎಂದು ಪಿಸಿಬಿ ವಕ್ತಾರ ಆಮಿರ್ ಮೀರ್ ರವಿವಾರ ಹೇಳಿದ್ದಾರೆ.
ಆಯ್ಕೆಯ ಕುರಿತು ಪಿಸಿಬಿ, ಐಸಿಸಿಗೆ ಮಾಹಿತಿ ನೀಡಿದೆ ಎಂದು ಮೀರ್ ಹೇಳಿದ್ದಾರೆ.
ಯುಎಇನಲ್ಲಿ ಯಾವ ಸ್ಥಳದಲ್ಲಿ ಪಂದ್ಯಗಳು ನಡೆಯುತ್ತವೆ ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ದೃಢಪಡಿಸಿಲ್ಲ. ದುಬೈನಲ್ಲಿ ಪಂದ್ಯ ನಡೆಯುವ ಸಾಧ್ಯತೆ ಅಧಿಕವಿದೆ.
ಪಾಕಿಸ್ತಾನ ತಂಡ ಕೂಡ 2024-27ರ ಅವಧಿಯಲ್ಲಿ ಐಸಿಸಿ ಟೂರ್ನಿಗಳನ್ನು ಭಾರತದಲ್ಲಿ ಆಡುವುದಿಲ್ಲ. ಭಾರತವು 2025ರ ಮಹಿಳೆಯರ ಏಕದಿನ ವಿಶ್ವಕಪ್ ಹಾಗೂ 2026ರಲ್ಲಿ ಶ್ರೀಲಂಕಾದ ಜೊತೆಗೂಡಿ ಪುರುಷರ ಟಿ-20 ವಿಶ್ವಕಪ್ ಆತಿಥ್ಯವಹಿಸಿದ ಸಂದರ್ಭ ಪಾಕಿಸ್ತಾನ ತಂಡವು ತಟಸ್ಥ ತಾಣದಲ್ಲಿ ಆಡಲು ನಿರ್ಧರಿಸಿದೆ.
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಒಂದು ಸಹಿತ ಮೂರು ಗ್ರೂಪ್ ಪಂದ್ಯಗಳನ್ನು ಆಡಲಿದೆ. ಪಂದ್ಯಾವಳಿಯಲ್ಲಿ ಭಾರತದ ಸಾಧನೆಯನ್ನು ಅವಲಂಬಿಸಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಯುಎಇ ಆತಿಥ್ಯವಹಿಸುವ ಸಾಧ್ಯತೆಯಿದೆ.
ಪಾಕಿಸ್ತಾನ ಹಾಗೂ ಭಾರತ ನಡುವಿನ ರಾಜಕೀಯ ಉದ್ವಿಗ್ನತೆಯ ಕಾರಣ 2012ರಿಂದ ಪಾಕ್ ಕ್ರಿಕೆಟ್ ತಂಡವು ಭಾರತಕ್ಕೆ ಪ್ರವಾಸ ಕೈಗೊಂಡಿಲ್ಲ. ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷದ ಪುರುಷರ ವಿಶ್ವಕಪ್ಗೆ ಪಾಕಿಸ್ತಾನ ತಂಡವು ಭಾರತಕ್ಕೆ ತೆರಳಿತ್ತು. ಆದರೆ ವಿಶ್ವಕಪ್ ಆರಂಭವಾಗುವ ಮೊದಲೇ ಭಾರತ ತಂಡವು ಏಶ್ಯಕಪ್ ಆಡಲು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿತ್ತು. ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.